ನ್ಯೂಸ್

ಇನ್ನೂ ಕಾಶ್ಮೀರದಲ್ಲೇ ಅಡಗಿದ್ದಾರೆ ಪಹಲ್ಗಾಮ್​ ಮೇಲೆ ದಾಳಿ ಮಾಡಿದ ರಣಹೇಡಿಗಳು: NIA ತನಿಖೆ ಚುರುಕು! Pahalgam Terror Attack

Pahalgam Terror Attack : ಪ್ರವಾಸಿಗರ ಸ್ವರ್ಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿ ನಡೆದು ಒಂದು ವಾರಕ್ಕೂ ಹೆಚ್ಚು ಸಮಯ ಕಳೆದಿದೆ. ಏಪ್ರಿಲ್​ 22ರಂದು ಈ ಘೋರ ಘಟನೆ ನಡೆಯಿತು. ಇದರಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಪರಾರಿಯಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಆಘಾತಕಾರಿ ಸಂಗತಿ ಏನೆಂದರೆ, ಆ ಭಯೋತ್ಪಾದಕರು ಇನ್ನೂ ಕಾಶ್ಮೀರದಲ್ಲೇ ಸಕ್ರಿಯರಾಗಿದ್ದಾರೆ ಮತ್ತು ಅಡಗಿಕೊಂಡಿದ್ದಾರೆ ಎಂಬ ಬಲವಾದ ಸೂಚನೆಗಳಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೂಲಗಳು ತಿಳಿಸಿವೆ.

ಕೆಲ ಸುದ್ದಿ ಮೂಲಗಳು ಎನ್​ಐಎ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಘಟನೆ ನಡೆದ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಅಡಗಿಕೊಂಡಿರುವ ಸಾಧ್ಯತೆ ಇದೆ ಎಂಬುದನ್ನು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಸಮಯದಲ್ಲಿ, ಭದ್ರತಾ ಪಡೆಗಳೇನಾದರೂ ತಕ್ಷಣ ಪ್ರತಿಕ್ರಿಯಿಸಿದ್ದರೆ, ಹೆಚ್ಚುವರಿ ಉಗ್ರರು ಗುಂಡು ಹಾರಿಸಲು ಅಡಗಿ ಕುಳಿತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಸಂಬಂಧಿಸಿದ ಕೆಲವು ಸೂಚನೆಗಳು ಸಹ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ದಾಳಿಕೋರರು ಅಥವಾ ರಣಹೇಡಿಗಳು ಹೆಚ್ಚು ಸ್ವಾವಲಂಬಿಗಳಾಗಿದ್ದು, ಆಹಾರ ಸಾಮಗ್ರಿಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ ಎಂದು ವರದಿಯಾಗಿದೆ. ಇದರಿಂದಾಗಿ ಯಾವುದೇ ಲಾಜಿಸ್ಟಿಕ್ ಬೆಂಬಲದ ಅಗತ್ಯವಿಲ್ಲದೆ ಅರಣ್ಯ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅವರಿಗೆ ಅನುಕೂಲವಾಗುತ್ತದೆ. ತನಿಖಾ ಸಂಸ್ಥೆಗಳು ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ದಾಳಿಯ ನಿಖರತೆಯನ್ನು ಬಹಿರಂಗಪಡಿಸಿವೆ.

'ಮಿನಿ ಸ್ವಿಟ್ಜರ್ಲೆಂಡ್' ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಬೈಸರನ್ ಹುಲ್ಲುಗಾವಲಿನ ಪ್ರದೇಶಕ್ಕೆ ಏಪ್ರಿಲ್​ 22ರಂದು ಸಾಕಷ್ಟು ಪ್ರವಾಸಿಗರು ಭೇಟಿ ನೀಡಿದ್ದರು. ಈ ವೇಳೆ ಸರಿಯಾದ ಸಮಯ ನೋಡಿ ಎಂಟ್ರಿಯಾದ ದಾಳಿಕೋರರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮೊದಲು ನಿರ್ಬಂಧಿಸಿದರು. ಬಳಿಕ ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯನ್ನು ನಾಲ್ವರು ಭಯೋತ್ಪಾದಕರು ನಡೆಸಿದ್ದಾರೆ. ಇಬ್ಬರು ಮುಖ್ಯ ದ್ವಾರದ ಮೂಲಕ ಪ್ರವೇಶಿಸಿದರೆ, ಓರ್ವ ಉಗ್ರನನ್ನು ನಿರ್ಗಮನ ದ್ವಾರದಲ್ಲಿ ನಿಯೋಜಿಸಲಾಗಿತ್ತು ಮತ್ತು ನಾಲ್ಕನೆಯ ಉಗ್ರ ಬೆಂಬಲಕ್ಕಾಗಿ ಸುತ್ತಮುತ್ತಲಿನ ಪೈನ್ ಕಾಡಿನಲ್ಲಿ ಅಡಗಿಕೊಂಡಿದ್ದನೆಂದು ಶಂಕಿಸಲಾಗಿದೆ.

ಮೂವರು ಭಯೋತ್ಪಾದಕರು, ಮಳಿಗೆಗಳಲ್ಲಿ ಶಾಪಿಂಗ್​ ಮಾಡುತ್ತಿದ್ದ, ಕುದುರೆ ಸವಾರಿ ಮಾಡುತ್ತಿದ್ದ ಅಥವಾ ತಿಂಡಿಗಳನ್ನು ಆನಂದಿಸುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು, ಗುಂಡು ಹಾರಿಸಿದ್ದಾರೆ. ದಾಳಿಕೋರರಲ್ಲಿ ಇಬ್ಬರು ಮಿಲಿಟರಿ ಸಮವಸ್ತ್ರ ಧರಿಸಿದ್ದರು. ಆದರೆ, ಮೂರನೆಯ ಉಗ್ರ ಸಾಂಪ್ರದಾಯಿಕ ಕಾಶ್ಮೀರಿ ಫೆರಾನ್ ಧರಿಸಿದ್ದ. ನಿರ್ಗಮನ ದ್ವಾರದ ಬಳಿ ಮೊದಲ ಗುಂಡಿನ ಮೊರೆತ ಕೇಳಿತು. ಇದರಿಂದ ಭಯಭೀತರಾದ ಪ್ರವಾಸಿಗರು ಪ್ರವೇಶದ್ವಾರದ ಕಡೆಗೆ ಧಾವಿಸಿದಾಗ, ಈಗಾಗಲೇ ಅಲ್ಲಿ ನೆಲೆಸಿದ್ದ ಇನ್ನಿಬ್ಬರು ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು.

ಇನ್ನು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಉಗ್ರರ ಭಯಾನಕ ಸಂಚು ಏನೆಂಬುದನ್ನು ಬಹಿರಂಗಪಡಿಸುತ್ತದೆ. ಭಯೋತ್ಪಾದಕರು ಮಹಿಳೆಯರನ್ನು ಪುರುಷರಿಂದ ಮತ್ತು ಹಿಂದೂಗಳನ್ನು ಮುಸ್ಲಿಮರಿಂದ ಪ್ರತ್ಯೇಕಿಸಲು ಪ್ರಯತ್ನಿಸಿದ್ದಾರೆ. ಅದನ್ನು ಜನಸಮೂಹ ನಿರಾಕರಿಸಿದಾಗ, ದಾಳಿಕೋರರು ಜನರನ್ನು ಕಲ್ಮಾ (ಇಸ್ಲಾಮಿಕ್ ನಂಬಿಕೆಯ ಘೋಷಣೆ) ಪಠಿಸಲು ಕೇಳಿಕೊಂಡರು. ಇದಾದ ಕೆಲವೇ ಕ್ಷಣಗಳಲ್ಲಿ ಆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಗುಂಡಿನ ದಾಳಿಗೆ ಮೊದಲು ಬಲಿಯಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪ್ರವೇಶ ದ್ವಾರದ ಮೂಲಕ ಬಂದಿದ್ದರು.

ಚಹಾ ಮತ್ತು ಭೇಲ್​ಪುರಿ ಅಂಗಡಿಗಳ ಬಳಿ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿದ್ದು, ಅಲ್ಲಿ ಅನೇಕ ಪ್ರವಾಸಿಗರು ಸೇರಿದ್ದರು. ಹತ್ಯಾಕಾಂಡದ ನಂತರ, ಭಯೋತ್ಪಾದಕರು ಉದ್ಯಾನದ ಎಡಭಾಗದಲ್ಲಿರುವ ಗೋಡೆ ಹಾರಿ ಆ ಪ್ರದೇಶದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ದಾಳಿಯ ಸಮಯದಲ್ಲಿ ಭಯೋತ್ಪಾದಕರು ಅತಿ ಸುರಕ್ಷಿತ ಸಂವಹನ ವ್ಯವಸ್ಥೆಯನ್ನು ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಸಂವಹನ ವ್ಯಸಸ್ತೆಗೆ ಸಿಮ್ ಕಾರ್ಡ್ ಅಗತ್ಯವಿಲ್ಲ ಮತ್ತು ಅಲ್ಪ-ಶ್ರೇಣಿಯ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಕಳುಹಿಸಲು ಅವಕಾಶ ನೀಡುತ್ತದೆ. ಈ ತಂತ್ರಜ್ಞಾನವು ತನಿಖಾ ಸಂಸ್ಥೆಗಳಿಗೆ ನೈಜ-ಸಮಯದ ಪ್ರತಿಬಂಧ ಮತ್ತು ಟ್ರ್ಯಾಕಿಂಗ್ ಅನ್ನು ಹೆಚ್ಚು ಕಷ್ಟಕರವಾಗಿಸುತ್ತದೆ.

ದಾಳಿಗೆ ಕೇವಲ ಒಂದು ವಾರದ ಮೊದಲು ಅಂದ್ರೆ ಏಪ್ರಿಲ್ 15 ರಂದು ಭಯೋತ್ಪಾದಕರು ಈ ಪ್ರದೇಶದ ಮೂರು ಸ್ಥಳಗಳ ಮೇಲೆ ಕಣ್ಗಾವಲು ನಡೆಸಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಶಂಕಿತರಲ್ಲಿ ಒಬ್ಬ ಸ್ಥಳೀಯ ಮನೋರಂಜನಾ ಉದ್ಯಾನವನವನ್ನು ಸಹ ಸಮೀಕ್ಷೆ ಮಾಡಿದ್ದ. ಆದರೆ, ಬಿಗಿ ಭದ್ರತೆಯಿಂದಾಗಿ ಅದನ್ನು ಗುರಿಯಾಗಿಸುವ ಯೋಜನೆಯನ್ನು ಕೈಬಿಟ್ಟಿದರು ಎಂಬ ಶಾಕಿಂಗ್​ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)