ಪಹಲ್ಗಾಮ್ ನರಮೇಧದ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಲಾಗಿದ್ದು, ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೋಯ್ಬಾ ಬೆಂಬಲಿತ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಕೌಂಟರ್ ಟೆರರಿಸಂ ಆಂಡ್ ಕೌಂಟರ್ ರ್ಯಾಡಿಕಲೈಸೇಷನ್ (ಸಿಟಿಸಿಆರ್) ವಿಭಾಗ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಎನ್ಐಎಗೆ ಹಸ್ತಾಂತರಿಸಿದೆ. ಈ ಹಿನ್ನೆಲೆಯಲ್ಲಿ ಎನ್ಐಎ ದಾಳಿ ನಡೆದ 4 ದಿನದ ಬಳಿಕ ಶನಿವಾರ ಹೊಸ ಎಫ್ಐಆರ್ ದಾಖಲಿಸಿಕೊಂಡಿದೆ. ದಾಳಿ ನಡೆದ ಬಳಿಕ ಏಪ್ರಿಲ್ 23 ರಂದು ಡಿಜಿಪಿ ರ್ಯಾಂಕ್ನ ಅಧಿಕಾರಿ ನೇತೃತ್ವದ ಎನ್ಐಎ ತಂಡ ಬೈಸರನ್ಗೆ ಭೇಟಿ ನೀಡಿತ್ತು. ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ತನಿಖೆ ಆರಂಭಿಸಿದೆ. ಎನ್ಐಎ ಅಧಿಕಾರಿಗಳ ತಂಡ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ ಉಗ್ರರ ಕುರಿತು ವಿವರ ಕಲೆ ಹಾಕುತ್ತಿದ್ದಾರೆ.