ನ್ಯೂಸ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಾರ್ಯಕ್ರಮ ಉದ್ಘಾಟನೆಗೆ ಪದ್ಮಶ್ರೀ ಹರೇಕಳ ಹಾಜಬ್ಬನವರಿಗೆ ಆಮಂತ್ರಣ; ಹಲವರಿಂದ ತೀವ್ರ ವಿರೋಧ

ಮಂಗಳೂರು: ಕಿತ್ತಳೆ ಹಣ್ಣು ಮಾರಾಟದಿಂದ ಗಳಿಸಿದ ಹಣದಲ್ಲಿ ಶಾಲೆ ನಿರ್ಮಿಸಿರುವ ಹರೇಕಳ ಹಾಜಬ್ಬ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಆದರೆ ಈಗ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಹೆಸರನ್ನು ಪೌರತ್ವ ಕಾಯ್ದೆ ವಿರೋಧಿ ಹೋರಾಟಗಾರರು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾಳೆ ಉಡುಪಿಯ ಐಷಾರಾಮಿ ಹೋಟೆಲ್​ವೊಂದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಾರ್ಯಕ್ರಮ ನಡೆಯಲಿದ್ದು ಅದನ್ನು ಹರೇಕಳ ಹಾಜಬ್ಬ ಅವರ ಕೈಯಿಂದ ಉದ್ಘಾಟನೆ ಮಾಡಿಸಲು ಆಯೋಜಕರು ಮುಂದಾಗಿದ್ದಾಗಿದ್ದಾರೆ. ಅಲ್ಲದೆ ಈ ಕಾರ್ಯಕ್ರಮ ಏನು, ಎತ್ತ ಎಂಬ ಬಗ್ಗೆ ಹಾಜಬ್ಬ ಅವರಿಗೆ ತಿಳಿಸಿಲ್ಲ. ತಪ್ಪು ಮಾಹಿತಿ ನೀಡಿ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ. ಇದು ಹಲವರ ವಿರೋಧಕ್ಕೆ ಕಾರಣವಾಗಿದೆ.

ಈ ಬಗ್ಗೆ ಹರೇಕಳ ಹಾಜಬ್ಬನವರ ಬಳಿ ಕೇಳಿದಾಗ, ಕಾರ್ಯಕ್ರಮದ ಉದ್ದೇಶ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಾರ್ಯಕ್ರಮ ಉದ್ಘಾಟಿಸಲು ಹಾಜಬ್ಬ ಅವರನ್ನು ಆಯೋಜಕರು ಆಹ್ವಾನಿಸಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್​ ಅಹಮ್ಮದ್​ ಹೇಳಿಕೆ ನೀಡಿದ್ದಾರೆ.

ಹಾಜಬ್ಬ ಜಾತಿ-ಮತ ಮೀರಿ ಬೆಳೆದಿರುವ ದಾರ್ಶನಿಕ. ಅವರನ್ನು ಎಲ್ಲ ವರ್ಗದ ಜನರೂ ಪ್ರೀತಿಸುತ್ತಾರೆ. ಈ ಕಾರ್ಯಕ್ರಮ ಅವರ ವ್ಯಕ್ತಿತ್ವಕ್ಕೇ ಮಸಿ ಬಳಿಯಲಿದೆ. ಇವರನ್ನೂ ಜನರು ದ್ವೇಷಿಸಲು ಪ್ರಾರಂಭಿಸುತ್ತಾರೆ. ಆಯೋಜಕರು ತಮಗೆ ಪ್ರಚಾರ ಬೇಕು ಎಂದು ಹಾಜಬ್ಬ ಅವರ ವ್ಯಕ್ತಿತ್ವವನ್ನು ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)