ಮೂಡಿಗೆರೆ: ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದ ಮಳೆ ಸ್ವಲ್ಪ ದಿನ ಆರ್ಭಟಿಸಿತು. ಆ ವೇಳೆ ಗದ್ದೆಯಲ್ಲಿ ನೀರಾಗಿದ್ದರಿಂದ ಕೆಲ ರೈತರು ಭತ್ತದ ಸಸಿ ನಾಟಿ ಮಾಡಿದರು. ಆದರೆ ಈಗ ಮಳೆ ಕ್ಷೀಣಿಸಿದ್ದರಿಂದ ಹೊಳೆಸಾಲಿನ ಗದ್ದೆಗಳ ಭತ್ತದ ಸಸಿ ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ನಾಟಿ ಮಾಡಲು ನೀರಿಲ್ಲದೆ ಸಸಿ ಮಡಿಗಳನ್ನು ಜಾನುವಾರು ಮೇಯಲು ಬಿಟ್ಟಿದ್ದಾರೆ.
ಪ್ರತಿ ವರ್ಷ ಗದ್ದೆ ನಾಟಿ ಸಮಯದಲ್ಲಿ ಹಲವು ಸಮಸ್ಯೆ ರೈತರನ್ನು ಬೇತಾಳದಂತೆ ಕಾಡುತ್ತಿದೆ. 2019ರಿಂದ ನಿರಂತರ ಅತಿವೃಷ್ಟಿಯುಂಟಾಗಿ ಭತ್ತದ ಗದ್ದೆಗಳು ಕೊಚ್ಚಿಹೋಗಿದ್ದವು. ಕೆಲವೆಡೆ ಮೇಲ್ಭಾಗದಿಂದ ಮಳೆ ನೀರಿನೊಂದಿಗೆ ಮರಳು ಹರಿದುಬಂದು ಗದ್ದೆಯಲ್ಲಿ ಸಂಗ್ರಹವಾಗುತ್ತಿತ್ತು. ಮರಳು ತೆರವುಗೊಳಿಸಿ ಕೊಚ್ಚಿಹೋದ ಭಾಗವನ್ನು ಸರಿಪಡಿಸಿ ಮತ್ತೆ ಹೊಸದಾಗಿ ಸಸಿಮಡಿ ತಯಾರಿಸಿ ಭತ್ತದ ನಾಟಿಗೆ ಸಾಧ್ಯವಾಗಿರಲಿಲ್ಲ. ನದಿ ಉಕ್ಕಿದಾಗ ಹೊಳೆಸಾಲಿನ ಗದ್ದೆಗಳು ಜಲಾವೃತವಾಗಿ ನಾಟಿ ಮಾಡಿದ ಸಸಿಗಳು ನಾಶಗೊಂಡಿದ್ದವು. ಕಾಡಾನೆ ಇತರ ಕಾಡುಪ್ರಾಣಿಗಳ ಹಾವಳಿಯಿಂದ ಗದ್ದೆಗೆ ತೆರಳಲಾಗದೆ ರೈತರು ಗದ್ದೆಯನ್ನು ಪಾಳುಬಿಟ್ಟಿದ್ದರು.
ತಾಲೂಕಿನಲ್ಲಿ ಈ ವರ್ಷ 3.5 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಗೋಣಿಬೀಡು ಹೋಬಳಿ ಕೆಲ ಗ್ರಾಮಗಳಲ್ಲಿ ಸಸಿಮಡಿಗಳನ್ನು ಕಾಡಾನೆ ಹಿಂಡು ತುಳಿದು ನಾಶಪಡಿಸಿವೆ. ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಕೆರೆಗಳಲ್ಲಿ ನೀರಿಲ್ಲದೆ ಗದ್ದೆಗಳಲ್ಲಿ ಹರಿಯುವ ಕಾಲುವೆಗಳು ಬತ್ತಿಹೋಗಿವೆ. ಹೇಮಾವತಿ, ಜಪಾವತಿ ಸಹಿತ ತಾಲೂಕಿನಲ್ಲಿ ಹರಿಯುವ 8 ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ವರ್ಷಪೂರ್ತಿ ಗದ್ದೆಯಲ್ಲಿ ಕೆಲಸ ಮಾಡಿ ಬೆಳೆದರೂ ಭತ್ತದಲ್ಲಿ ಲಾಭವಿಲ್ಲ ಎಂದು ಗದ್ದೆಗಳನ್ನು ಕಾಫಿತೋಟ ಹಾಗೂ ನಿವೇಶನ ಮಾಡುತ್ತಿದ್ದಾರೆ. ಕೆಲ ರೈತರು ಮಾತ್ರ ಭತ್ತದ ಕೃಷಿ ಕೈಬಿಡಬಾರದೆಂದು ಗದ್ದೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಭತ್ತ ಬೆಳೆಯಲಾಗುತ್ತಿಲ್ಲ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ಭತ್ತದ ಕೃಷಿ ಸಂಪೂರ್ಣ ಕುಂಠಿತಗೊಂಡಿದೆ.
ಮಳೆಯಿಲ್ಲದೆ ಭತ್ತ ಬೆಳೆಯಲು ಸಾಧ್ಯವಿಲ್ಲ. ಕಾಡುಪ್ರಾಣಿ ಹಾವಳಿಯಿಂದ ರೈತರು ಗದ್ದೆಗೆ ಹೋಗಲು ಭಯಪಡುತ್ತಿದ್ದಾರೆ. 4 ವರ್ಷದ ಅತಿವೃಷ್ಟಿಯಿಂದ ಭತ್ತ ಬೆಳೆಯಲು ಸಾಧ್ಯವಾಗಿರಲಿಲ್ಲ. ಕೆಲವೆಡೆ ಗದ್ದೆಯನ್ನು ಕಾಫಿ ತೋಟ, ಇನ್ನು ಕೆಲವೆಡೆ ನಿವೇಶನ ಮಾಡಲಾಗಿದೆ. ಈ ವರ್ಷ ಭತ್ತ ಬೆಳೆಯುವ ಉತ್ಸಾಹದಲ್ಲಿದ್ದ ರೈತರಿಗೆ ಮಳೆ ಕೈಕೊಟ್ಟಿದ್ದರಿಂದ ನಿರಾಸೆಯಾಗಿದೆ. ಸಸಿಮಡಿಗಳು ಜಾನುವಾರುಗಳ ಪಾಲಾಗಿದೆ ಎನ್ನುತ್ತಾರೆ ಕೃಷಿಕ ಪಿ.ಕೆ.ಮಂಜುನಾಥ್.
ಗದ್ದೆಗೆ ನದಿ ನೀರು ಉಕ್ಕಿ ಹರಿಯುವ ಭಯದಿಂದ ಹೊಳೆಸಾಲಿನ ಗದ್ದೆಗಳಲ್ಲಿ ರೈತರು ತಡವಾಗಿ ನಾಟಿ ಮಾಡುತ್ತಾರೆ. ಆದರೆ ಈಗ ಹಾಕಿದ್ದ ಸಸಿಮಡಿಗಳು ನೀರಿಲ್ಲದೆ ಒಣಗುತ್ತಿವೆ. ನಾಟಿಯಾಗಿರುವ ಗದ್ದೆಗಳ ಮಾಹಿತಿ ಸಂಗ್ರಹಿಸುತ್ತಿದ್ದೇವೆ. 3550 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಮಾಹಿತಿ ನೀಡಿದರು.