ಬೆಂಗಳೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆಯು ಶೋಕಿ ಯಾತ್ರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಸಿ ಬಳಿಯುವ ಕೆಸಲಕ್ಕೆ ಕೈಹಾಕಿದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂಅಹ್ಮದ್ ಎಚ್ಚರಿಸಿದ್ದಾರೆ.
ಈ ಯಾತ್ರೆಯಲ್ಲಿ ಮುಖಂಡರು ಜನರ ಯಾವುದೇ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸದೆ, ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ನಡೆಸುತ್ತಿದ್ದಾರೆ. ಇವರಿಗೆ ಜನತಕ್ಕ ಪಾಠ ಕಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆ, ಭಾರತ್ ನ್ಯಾಯ ಯಾತ್ರೆಯಲ್ಲಿ ಹಳ್ಳಿ ಹಳ್ಳಿಗಳಿಗೂ ಹೋಗಿ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಜನರ ನೋವಿಗೆ ಧ್ವನಿಯಾಗಿದ್ದರು. ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದರು. ಆ ಪಾದಯಾತ್ರೆ ದೇಶಾದ್ಯಂತ ಜನರ ಗಮನ ಸೆಳೆದಿತ್ತು. ಬಿಜೆಪಿ ಜೆಡಿಎಸ್‌ನವರು ಜನರ ಸಮಸ್ಯೆಗಳನ್ನು ಕೇಳುವುದಿರಲಿ ಇವರ ಸಮಸ್ಯೆಗಳೇ ಹೆಚ್ಚಾಗಿದೆ ಎಂದಿದ್ದಾರೆ.
ಇವರ ಹಗರಣಗಳೇ ತುಂಬಿ ತುಳುಕುತ್ತಿವೆ. ಪಾದಯಾತ್ರೆ ಉದ್ದಕ್ಕೂ ಜನ ಇವರ ಹಗರಣಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾಗಿ ಇವರು ಜನರ ಸಮಸ್ಯೆ ಆಲಿಸಲು ಹೋಗುತ್ತಿಲ್ಲ. ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ, ಬದ್ಧತೆ ಇರುವ ರಾಜಕಾರಣಿ. ಅವರು 40 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ಸಮಾಜವಾದಿ ಸಿದ್ಧಾಂತದ ರಾಜಕಾರಣಿಯಾಗಿ ಗುರುತಿಸಿದ್ದಾರೆ. ರೈತರು, ಬಡವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಹಾಗೂ ವೈಯುಕ್ತಿಕ ಬದುಕಿಗಿಂತ ರಾಜ್ಯದ ಜನತೆಯ ಹಿತವನ್ನುಕಾಪಾಡುವ ಅವರ ಏಳಿಗೆ ಸಹಿಸಿಕೊಳ್ಳಲಾಗದೆ ಬಿಜೆಪಿ- ಜೆಡಿಎಸ್ ಸುಳ್ಳಿನ ಸರಮಾಲೆ ಹೊತ್ತು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕುಟುಕಿದ್ದಾರೆ.
ಮೂಡ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಯಾವುದೇ ತಪ್ಪಿಲ್ಲ ಎಂಬುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರಿಗೂ ಅರಿವಿದೆ. ಅದಕ್ಕಾಗಿಯೇ ಮೊದಲು ಈ ಪಾದಯಾತ್ರೆ ಮಾಡುವುದು ಬೇಡ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದರು.
ನಂತರ ಒಲ್ಲದ ಮನಸ್ಸಿನಿಂದ ಈ ಪಾದಯಾತ್ರೆಗೆ ಒಪ್ಪಿದ್ದರು. ಜೆಡಿಎಸ್-ಬಿಜೆಪಿ ನಾಯಕರ ಮಕ್ಕಳ ನಾಯಕತ್ವದ ನಡುವಿನ ಪೈಪೋಟಿಯ ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.