ನ್ಯೂಸ್

ಪಾದರಾಯನಪುರ ದಾಂಧಲೆ: ರಾತ್ರಿಯಿಡೀ ಅಲ್ಲಿ ಕಾರ್ಯಾಚರಣೆ ನಡೆಸಿ, ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರಿಗೆ ಈಗ ದೊಡ್ಡ ಆತಂಕ..

ಬೆಂಗಳೂರು: ಪಾದರಾಯನಪುರದ ಗಲಾಟೆ ಅದೆಷ್ಟರ ಮಟ್ಟಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದರೆ ಈಗ ಪೊಲೀಸರಲ್ಲೂ ಆತಂಕ ಶುರುವಾಗಿದೆ.

ಕರೊನಾ ಸೋಂಕಿತರು ಕ್ವಾರಂಟೈನ್​​ಗೆ ಕರೆದುಕೊಂಡು ಹೋಗಲು ಬಂದಿದ್ದ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳ ಮೇಲೆ ಅಲ್ಲಿನ ಕೆಲವರು ಸೇರಿಕೊಂಡು ಹಲ್ಲೆ ನಡೆಸಿ, ಪೊಲೀಸ್​ ಬ್ಯಾರಿಕೇಡ್​​ಗಳನ್ನು ಧ್ವಂಸ ಮಾಡಿ, ಸೀಲ್​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದರು.

ಸ್ಥಳಕ್ಕೆ ತೆರಳಿದ್ದ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಸದ್ಯ ಯುವತಿ ಸೇರಿ 59 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಆದರೆ ಈಗ ಪೊಲೀಸರಿಗೆ ಆತಂಕವೊಂದು ಶುರುವಾಗಿದೆ. ಸೆರೆ ಸಿಕ್ಕ ಆರೋಪಿಗಳಲ್ಲಿ ಯಾರಿಗಾದರೂ ಕರೊನಾ ಲಕ್ಷಣಗಳು ಇದ್ದರೆ ಅದು ಪೊಲೀಸರಿಗೂ ತಗುಲುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ಪಾದರಾಯನಪುರ ಕರೊನಾ ಹಾಟ್​ಸ್ಫಾಟ್​ ಆಗಿರುವುದರಿಂದ ಸಹಜವಾಗಿಯೇ ಭಯ ಪ್ರಾರಂಭವಾಗಿದೆ.

ಅಲ್ಲಿ ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್​ ಸಿಬ್ಬಂದಿಗೆ ಇಡೀ ದೇಹವನ್ನು ಸ್ಯಾನಿಟೈಸ್​ ಮಾಡಿಕೊಂಡು ಮನೆಗೆ ಹೋಗಿ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈಗ ಸೆರೆಸಿಕ್ಕವರಲ್ಲಿ ಯಾರಿಗಾದರೂ ಕ್ವಾರಂಟೈನ್​ ಅಗತ್ಯವಿದೆಯಾ ಎಂದು ನೋಡುವ ಜವಾಬ್ದಾರಿಯೂ ಇದೆ. ಆದರೆ ಇದರ ಮಧ್ಯೆ ಅಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೂ ಕ್ವಾರಂಟೈನ್​ ಬೇಕಾಗಬಹುದು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)