ನ್ಯೂಸ್

ಓಜೋನ್ ರಕ್ಷಣೆ ಅವಶ್ಯಕ:ಪ್ರೊ.ಚಂದ್ರಶೇಖರ್

ಶಿವಮೊಗ್ಗ: ಆಧುನಿಕ ಜೀವನ ಶೈಲಿ ಓಜೋನ್ ಪದರಕ್ಕೆ ಮಾರಕವಾಗಿ ಪರಿಣಮಿಸಿದೆ. ಜನರು ಜೀವನಶೈಲಿ ಬದಲಾಯಿಸಿಕೊಂಡರೆ ಮಾತ್ರ ಓಜೋನ್ ಪದರವನ್ನು ರಕ್ಷಿಸಲು ಸಾಧ್ಯ ಎಂದು ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಎಸ್‌ಆರ್‌ಎನ್‌ಎಂ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಓಜೋನ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಪ್ರಕೃತಿ ಸಂರಕ್ಷಣೆಗೆ ನಮ್ಮ ಕೊಡುಗೆಯೇನು? ಎಂದು ಪ್ರಶ್ನಿಸಿಕೊಳ್ಳಲು ಇದು ಸಕಾಲ ಎಂದು ಹೇಳಿದರು.

ಮಿತಿಮೀರಿದ ವಾಹನ ಬಳಕೆಯಿಂದ ಕಾರ್ಬನ್ ಡೈ ಆಕ್ಸೈಡ್ ಮತ್ತಿತರ ರಾಸಾಯನಿಕಗಳು ಪರಿಸರವನ್ನು ಸೇರುತ್ತಿವೆ. ಇದರಿಂದ ಓಜೋನ್ ಪದರ ಶಿಥಿಲವಾಗುತ್ತಿದೆ. ಸೂರ್ಯನ ಆಲ್ಟ್ರಾವೈಲೆಟ್ ಕಿರಣಗಳು ಭೂಮಿಗೆ ನೇರವಾಗಿ ಪ್ರವೇಶಿಸಿ ಎಲ್ಲ ಜೀವರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಚರ್ಮದ ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗೆ ಇದು ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೇಡಿಯೋ ಶಿವಮೊಗ್ಗ ಎಫ್‌ಎಂ ನಿಲಯ ನಿರ್ದೇಶಕ ಜೆ.ಎಲ್. ಜನಾರ್ಧನ್ ಮಾತನಾಡಿ, ಓಜೋನ್ ಶಿಥಿಲಗೊಳ್ಳುವುದರಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ವ್ಯಾಪಕ ಚಿಂತನ, ಮಂಥನ ನಡೆಯಬೇಕಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜಕ ಡಾ.ನಾಗರಾಜ್ ಪರಿಸರ, ಪ್ರಾಚಾರ್ಯ ಡಾ.ಕೆ.ಎಲ್.ಅರವಿಂದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಭಾರ ಅಧಿಕಾರಿ ಶಿಲ್ಪಾ, ಎನ್‌ಎಸ್‌ಎಸ್ ಅಧಿಕಾರಿ ಕೆ.ಲಕ್ಷ್ಮಣ್, ಕಾರ್ಯಕ್ರಮ ಸಂಯೋಜಕ ಗುರುಪ್ರಸಾದ್ ಮುಂತಾದವರಿದ್ದರು.