ನ್ಯೂಸ್

ಮುಂಬೈನಲ್ಲಿ ಕರೊನಾಗೆ ಬಲಿಯಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸ್ಲಮ್​, ವಸತಿ ಸಂಕೀರ್ಣ ನಿವಾಸಿಗಳು

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟ ಒಟ್ಟು 179 ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಕೊಳಗೇರಿ ಹಾಗೂ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದವರೇ ಆಗಿದ್ದಾರೆ. ಇಲ್ಲಿಯವರೆಗೆ ಶೇ. 58 ರಷ್ಟು ಸಾವು ಇಲ್ಲಿನ ಪ್ರದೇಶಗಳಲ್ಲಿ ವರದಿಯಾಗಿದೆ.

ಜಿ- ಸೌಥ್​ ವಾರ್ಡ್​ನ ಸ್ಲಮ್​ ಮತ್ತು ವಸತಿ ಸಂಕೀರ್ಣದಲ್ಲಿ ಹೆಚ್ಚು ಕೋವಿಡ್​ -19 ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಜಿ-ಸೌಥ್ ವಾರ್ಡ್​, ರೋಲಿ ನಾಕಾದ​ಲ್ಲಿನ ಕಿಕ್ಕಿರಿದು ತುಂಬಿರುವ ರೊಲಿ-ಕೊಯಿಲ್​ವಾಡ, ಜಿಜಾಮಾತ ನಗರ ಸ್ಲಮ್​ ಮತ್ತು ಬಿಡಿಡಿ ವಸತಿ ಸಂಕೀರ್ಣವನ್ನು ಸುತ್ತುವರಿದಿದ್ದು, ಇಲ್ಲಿ 534 ಪಾಸಿಟಿವ್​ ಪ್ರಕರಣ ಏಪ್ರಿಲ್​ 23ರವರೆಗೆ ಪತ್ತೆಯಾಗಿವೆ.

ಮುಂಬೈನಲ್ಲಿ 106 ಇದ್ದ ಕಂಟೈನ್ಮೆಂಟ್​ ಝೋನ್​, ಇದೀಗ 1,036ಕ್ಕೆ ಏರಿದೆ. ಒಂದಕ್ಕಿಂತ ಹೆಚ್ಚು ಪಾಸಿಟಿವ್​ ಕೇಸ್ ಅಥವಾ ಐದು ಹೆಚ್ಚಿನ ಅಪಾಯದ ಸಂಪರ್ಕ ಪ್ರಕರಣಗಳು ಇರುವು ಸ್ಥಳವನ್ನು ರೆಡ್​ಝೋನ್​ ಎಂದು ಗುರುತಿಸಲಾಗಿದ್ದು, 1,036 ಏರಿಯಾಗಳಲ್ಲಿ 374 ಸ್ಲಮ್​ ಮತ್ತು ವಸತಿ ಸಂಕೀರ್ಣಗಳು ರೆಡ್​ಝೋನ್​ಗೆ ಸೇರಿವೆ. ಇಲ್ಲಿ ಲಾಕ್​ಡೌನ್​ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 374 ಸ್ಲಮ್​ ಮತ್ತು ವಸತಿ ಸಂಕೀರ್ಣದಲ್ಲಿ 1281 ಪಾಸಿಟಿವ್​ ಕೇಸ್​ಗಳಿದ್ದು, ಡಾಟಾ ಪ್ರಕಾರ 6900ಕ್ಕೂ ಹೆಚ್ಚಿನ ಅಪಾಯದ ಸಂಪರ್ಕ ಪ್ರಕರಣಗಳಿವೆ.

ಎಲ್​-ವಾರ್ಡ್​ ಕುರ್ಲಾ ಮತ್ತು ಸಕಿ ನಾಕಾ ಪ್ರದೇಶವನ್ನು ಸುತ್ತುವರಿದಿದ್ದು, 48 ಅತ್ಯಧಿಕ ರೆಡ್​ ಝೋನ್​ ಹೊಂದಿರುವ ಪ್ರದೇಶವಾಗಿದೆ. ಅಂಧೇರಿ(ಪಶ್ಚಿಮ), ಜುಹು ಮತ್ತು ವೆರ್ಸೊವಾದಲ್ಲಿ 40 ರೆಡ್​ಝೋನ್​ಗಳಿವೆ. ವಿಲೆ ಪರ್ಲೆ(ಪೂರ್ವ) ಹೆಚ್ಚು ಅಪಾಯದ ಸಂಪರ್ಕ ಪ್ರಕರಣಗಳಿವೆ.

ಒಟ್ಟಾರೆ ಮಹಾರಾಷ್ಟ್ರದಲ್ಲಿ ಈವರೆಗೂ 7628 ಪ್ರಕರಣಗಳು ವರದಿಯಾಗಿದ್ದು, 323 ಮಂದಿ ಸಾವಿಗೀಡಾಗಿದ್ದಾರೆ. 1076 ಮಂದಿ ಗುಣಮುಖರಾಗಿದ್ದಾರೆ. (ಏಜೆನ್ಸೀಸ್​)