ಪೋರ್ಟ್ ಮೊರೆಸ್ಬಿ: ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿರುವ ಪಪುವಾ ನ್ಯೂಗಿನಿ ದೇಶದಲ್ಲಿ ಭೀಕರ ಭೂ ಕುಸಿತ ಸಂಭವಿಸಿದ್ದು, ಅದರಲ್ಲಿ 670ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಆರಂಭ ಉಂಟಾಗಿದೆ. ಶುಕ್ರವಾರ ಸಂಭವಿಸಿದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಎಂಗಾ ಪ್ರಾಂತ್ಯದ ಕೌಕಲಂ ಎಂಬ ಗ್ರಾಮ ಭೂಕಂಪನಕ್ಕೆ ಸಂಪೂರ್ಣವಾಗಿ ನಾಶವಾಗಿದೆ. ಶುಕ್ರವಾರ ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಭೂಕುಸಿತ ಸಂಭವಿಸಿದೆ. ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದ ರಾಜಧಾನಿ ಪೋರ್ಟ್ ಮೊರೆಸ್ಬಿಯದ ವಾಯುವ್ಯ ಭಾಗದಲ್ಲಿ ಸರಿಸುಮಾರು 600 ಕಿ.ಮೀ (370 ಮೈಲಿ) ದೂರದಲ್ಲಿ ದುರ್ಘಟನೆ ಸಂಭವಿಸಿದೆ. ಪಾಪುವಾ ನ್ಯೂ ಗಿನಿಯಾ ಪೋಸ್ಟ್ ಕೊರಿಯರ್ ಸಂಸತ್ತಿನ ಸದಸ್ಯರಾದ, ಐಮೋಸ್ ಅಕೆಮ್ ಅವರು ಭೂಕುಸಿತದಲ್ಲಿ 1,182 ಮನೆಗಳು ಸಮಾಧಿಯಾಗಿದೆ ಎಂದು ವರದಿ ಮಾಡಿದ್ದಾರೆ.
ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಗ್ರಾಮಸ್ಥರು ಮನೆಯಲ್ಲಿ ಮಲಗಿದ್ದಾಗ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಎಂಗಾ ಪ್ರಾಂತ್ಯದ ಪ್ರತ್ಯೇಕ ಭಾಗದಲ್ಲಿ ಈ ದುರಂತ ಸಂಭವಿಸಿತ್ತು. ಬೃಹತ್ ಭೂಕುಸಿತದಿಂದ ಸಮಾಧಿಯಾದ ದೇಹಗಳನ್ನು ನಾವು ಇನ್ನೂ ಹುಡುಕುತ್ತಿದ್ದೇವೆ ಎಂದು ಸಮುದಾಯದ ನಾಯಕ ಮಾರ್ಕ್ ಇಪುಯಾ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ಸುಮಾರು 4 ಸಾವಿರ ಜನ ವಾಸವಿದ್ದರು. ಭೂಕುಸಿತದಿಂದ ಅಪಾರ ಸಂಖ್ಯೆಯಲ್ಲಿ ಜನ-ಜಾನುವಾರುಗಳ ಸಾವಾಗಿದೆ. ಫಲವತ್ತಾದ ಭೂಮಿ ಮತ್ತು ಶುದ್ಧ ನೀರಿನ ಮೂಲಗಳು ಕೂಡ ಪರಿಣಾಮಕಾರಿಯಾಗಿ ನಾಶವಾಗಿವೆ ಎಂದು ಸಹಾಯಕ ಸಂಸ್ಥೆಗಳು ತಿಳಿಸಿವೆ.