ನವದೆಹಲಿ: ಏಪ್ರಿಲ್ನಿಂದ ಜೂನ್ವರೆಗೆ ದೆಹಲಿ ಮೆಟ್ರೋ ಆವರಣದಲ್ಲಿ ರೀಲ್ಸ್ ಸೇರಿದಂತೆ ಇನ್ನಿತರ ತೊಂದರೆಗಳನ್ನು ಮಾಡಿದ್ದಕ್ಕಾಗಿ 1,600ಕ್ಕೂ ಹೆಚ್ಚು ಜನರ ಮೇಲೆ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಪ್ರಕರಣಗಳನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 3 ರಷ್ಟು ಕೇಸ್ಗಳು ದಾಖಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರೀಲ್ಸ್ ಮಾಡುವವರಿಗೆ ಪ್ರತ್ಯೇಕ ದಂಡವನ್ನು ವಿಧಿಸುವ ಯಾವುದೇ ಕ್ರಮವಿಲ್ಲ. ರೈಲಿನ ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ರೈಲಿನ ಒಳಗೆ ತಿನ್ನುವುದು ಕೂಡ ಮೆಟ್ರೋ ರೈಲಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಿರಿಯ ಡಿಎಂಆರ್‌ಸಿ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಮೆಟ್ರೋ ರೈಲ್ವೇಸ್ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 59ರ ಅಡಿಯಲ್ಲಿ ಮೆಟ್ರೋದಲ್ಲಿ ಹುಚ್ಚಾಟ ಮೆರೆದ 1,647 ಮಂದಿಗೆ ದಂಡ ವಿಧಿಸಲಾಗಿದೆ. ಕಳೆದ ವರ್ಷವು ಕೂಡ 1,600 ಮಂದಿಗೆ ದಂಡ ವಿಧಿಸಲಾಗಿತ್ತು. ಕಳೆದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕ್ರಮವಾಗಿ 610, 518 ಮತ್ತು 519 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಡಿಎಂಆರ್‌ಸಿ ತಿಳಿಸಿದೆ.
ಮೆಟ್ರೋ ಪ್ರದೇಶದಲ್ಲಿ ರೀಲ್ಸ್ ಮುಂತಾದವುಗಳನ್ನು ಮಾಡಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಜನರಿಗೆ ದಂಡ ವಿಧಿಸಲಾಗಿದೆ ಎಂದು ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಸದ್ಯ ಮೆಟ್ರೋ ಆವರಣದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ನಿಗಾವಹಿಸಿದ್ದೇವೆ. ರೀಲ್ಸ್ ಮಾಡುವುದು ನಮ್ಮ ಗಮನಕ್ಕೆ ಬಂದರೆ ದಂಡ ವಿಧಿಸುವ ಹಕ್ಕನ್ನು ನಾವು ಹೊಂದಿದ್ದೇವೆ. ಇದರಿಂದಾಗಿ ಅದೇಷ್ಟೋ ಜನರು ನಿರುತ್ಸಾಹಗೊಳ್ಳುತ್ತಿದ್ದಾರೆ. ಪ್ರತಿದಿನ 67 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದು, ಪ್ರತಿ ಮೂಲೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಲ್ಲಿ ಸಿಸಿಟಿವಿ ಹಾಗೂ ಪೋಸ್ಟರ್ಗಳನ್ನು ಹಾಕಲಾಗಿದೆ ಎಂದು ವಿಕಾಸ್ ಕುಮಾರ್ ಹೇಳಿದರು.
ರೈಲಿನಲ್ಲಿ ಇಬ್ಬರು ಯುವತಿಯರು ಪರಸ್ಪರ ಬಣ್ಣ ಬಳಿದುಕೊಳ್ಳುವ ವಿಡಿಯೋ ಏಪ್ರಿಲ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೇಳೆ ಆ ವಿಡಿಯೋ ಸಾಕಷ್ಟು ಪ್ರಯಾಣಿಕರಿಂದ ಟೀಕೆಗೆ ಒಳಗಾಗಿತ್ತು. ಸಹ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವಿವಿಧ ಅಭಿಯಾನಗಳನ್ನು ಸಹ ಆ ಸಂದರ್ಭದಲ್ಲಿ ನಡೆಸಲಾಯಿತು. ಅನುಚಿತವೆಂದು ಪರಿಗಣಿಸಲಾದ ಚಟುವಟಿಕೆಗಳನ್ನು ಪರಿಶೀಲಿಸಲು ಮೊಬೈಲ್ ತಪಾಸಣಾ ದಳಗಳನ್ನು ಸಹ ಕೆಲವೊಮ್ಮೆ ನಿಯೋಜಿಸಲಾಗುತ್ತದೆ ಎಂದು ಡಿಎಂಆರ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)