Anti Immigration Protesters : ಯುನೈಟೆಡ್ ಕಿಂಗ್‌ಡಮ್ ಇತಿಹಾಸದಲ್ಲೇ ಲಂಡನ್ ಶನಿವಾರ (ಸೆ.13) ಅತಿದೊಡ್ಡ ಬಲಪಂಥೀಯ (ರೈಟ್-ವಿಂಗ್) ಪ್ರತಿಭಟನೆಗೆ ಸಾಕ್ಷಿಯಾಯಿತು. ವಲಸೆ ವಿರೋಧಿ ಕಾರ್ಯಕರ್ತ ಟಾಮಿ ರಾಬಿನ್ಸನ್ ಅವರ ನೇತೃತ್ವದಲ್ಲಿ ಸುಮಾರು 1,00,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ಲಂಡನ್ನಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಹಲವಾರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯ ಪೊಲೀಸರು ವರದಿ ಮಾಡಿದ್ದಾರೆ.
ಅಂದಹಾಗೆ, ಈ ಪ್ರತಿಭಟನೆಯನ್ನು ಫಾರ್-ರೈಟ್ ಅಕ್ಟಿವಿಸ್ಟ್ ಟಾಮಿ ರಾಬಿನ್ಸನ್ (ಸ್ಟೀಫನ್ ಯ್ಯಾಕ್ಸ್ಲಿ-ಲೆನ್ನನ್) ನೇತೃತ್ವದಲ್ಲಿ ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಪ್ರತಿಭಟನಾಕಾರರು ಇಂಗ್ಲೆಂಡ್ ಮತ್ತು ಬ್ರಿಟನ್ ಧ್ವಜಗಳನ್ನು ಹಿಡಿದು, ವೆಸ್ಟ್‌ಮಿನ್‌ಸ್ಟರ್‌ನ ಕಡೆಗೆ ಮೆರವಣಿಗೆ ಮಾಡಿದರು. ಇದೇ ವೇಳೆ ರಾಬಿನ್ಸನ್ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್ ಅಪ್ ಟು ರೇಸಿಸಂ" ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು. "ಮಾರ್ಚ್ ಅಗೈನ್‌ಸ್ಟ್ ಫ್ಯಾಸಿಸಂ" ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಾರಾ ಸುಲ್ತಾನಾ ಮತ್ತು ಡಯಾನ್ ಅಬ್‌ಬಟ್‌ನಂತಹ ಸಂಸದರು ಕೂಡ ಭಾಗವಹಿಸಿದರು. ಈ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇನ್ನು ಪ್ರತಿಭಟನೆಗಳ ನಡುವೆ ಹಲವಾರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿ ಸುರಕ್ಷತಾ ಸಾಧನಗಳನ್ನು ಧರಿಸಿ, ಪ್ರತಿಭಟನೆಯನ್ನು ತಡೆಯಲು ಯತ್ನಿಸಿದರು. ವಲಸಿಗರನ್ನು ಹೊಂದಿರುವ ಹೋಟೆಲ್‌ಗಳ ಹೊರಗೆ ಭಾರಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಯೂನಿಯನ್ ಧ್ವಜ, ಕೆಂಪು ಮತ್ತು ಬಿಳಿ ಸೇಂಟ್ ಜಾರ್ಜ್ ಕ್ರಾಸ್ ಎರಡನ್ನೂ ಬೀಸಿದರು. ಕೆಲವರು ಅಮೆರಿಕನ್ ಮತ್ತು ಇಸ್ರೇಲಿ ಧ್ವಜಗಳನ್ನು ಸಹ ಪ್ರದರ್ಶಿಸಿದರು.
ಯುನೈಟ್ ದಿ ಕಿಂಗ್‌ಡಮ್ ಪ್ರತಿಭಟನೆಗೆ ಕಾರಣವೇನು?
ಅಂದಹಾಗೆ, ಯುನೈಟ್ ದಿ ಕಿಂಗ್‌ಡಮ್ ಪ್ರತಿಭಟನೆಗೆ ಮುಖ್ಯ ಕಾರಣವೇನೆಂದರೆ, ಬ್ರಿಟನ್‌ನ ಗಡಿಗಳನ್ನು ಬಲಪಡಿಸುವುದು ಮತ್ತು ಅಕ್ರಮ ವಲಸೆಯನ್ನು ನಿಲ್ಲಿಸುವುದು. ಇದಲ್ಲದೆ, ಪ್ರತಿಭಟನಾಕಾರರು ಗ್ರೇಟ್ ರಿಪ್ಲೇಸ್‌ಮೆಂಟ್ (ಯೂರೋಪಿಯನ್ ಜನರನ್ನು ದಕ್ಷಿಣ ಆಫ್ರಿಕಾ ಮತ್ತು ಮುಸ್ಲಿಂ ಸಂಸ್ಕೃತಿಯವರಿಂದ ಬದಲಾಯಿಸುವುದು) ಎಂಬ ಸಿದ್ಧಾಂತವನ್ನು ಬೆಂಬಲಿಸಿದರು.
ಪ್ರತಿಭಟನೆಯ ನಡುವೆ, ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಒಂದಾಗುತ್ತಿದ್ದಂತೆ, ಲಕ್ಷಾಂತರ ಜನರು ಈಗಾಗಲೇ ಮಧ್ಯ ಲಂಡನ್‌ನ ಬೀದಿಗಳಲ್ಲಿ ತುಂಬಿದ್ದಾರೆ ಎಂದು ರಾಬಿನ್ಸನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ, ರಾಬಿನ್ಸನ್ ತನ್ನನ್ನು ತಾನು ಸರ್ಕಾರದ ತಪ್ಪುಗಳನ್ನು ಬಹಿರಂಗಪಡಿಸುವ ಪತ್ರಕರ್ತ ಎಂದು ಬಣ್ಣಿಸಿಕೊಳ್ಳುತ್ತಾರೆ. ಅಲ್ಲದೆ, ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್‌ರಂತಹ ಪ್ರಭಾವಿ ವ್ಯಕ್ತಿಗಳು ಕೂಡ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಬ್ರಿಟನ್‌ನ ಅತಿದೊಡ್ಡ ವಲಸೆ ವಿರೋಧಿ ರಾಜಕೀಯ ಪಕ್ಷ ಮತ್ತು ಇತ್ತೀಚಿನ ಚುನಾವಣೆಗಳಲ್ಲಿ ಮುಂಚೂಣಿಯಲ್ಲಿರುವ ರಿಫಾರ್ಮ್ ಯುಕೆ, ರಾಬಿನ್ಸನ್ ಅವರ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದೆ. ಅದಕ್ಕೆ ಕಾರಣ ರಾಬಿನ್ಸನ್ ಮೇಲಿರುವ ಕ್ರಿಮಿನಲ್ ಅಪರಾಧಗಳು.
ನಮಗೆ ನಮ್ಮ ದೇಶ ಮರಳಿ ಬೇಕು, ನಮ್ಮ ವಾಕ್ ಸ್ವಾತಂತ್ರ್ಯ ಮತ್ತೆ ಹಳಿಗೆ ಬರಬೇಕು. ಈ ದೇಶಕ್ಕೆ ಅಕ್ರಮ ವಲಸೆಯನ್ನು ನಿಲ್ಲಿಸಬೇಕು. ಈ ವಿಚಾರದಲ್ಲಿ ನಾವು ಟಾಮಿ ರಾಬಿನ್ಸನ್ ಅವರನ್ನು ನಂಬುತ್ತೇವೆ ಎಂಬುದು ಪ್ರತಿಭಟಣೆಯಲ್ಲಿ ಭಾಗವಹಿಸಿದವರ ಕೂಗಾಗಿತ್ತು.
ಪೊಲೀಸ್ ಕಟ್ಟೆಚ್ಚರ
ಶನಿವಾರ ಲಂಡನ್‌ನಾದ್ಯಂತ 1,600 ಕ್ಕೂ ಹೆಚ್ಚು ಅಧಿಕಾರಿಗಳನ್ನು ಮೆಟ್ರೋಪಾಲಿಟನ್ ಪೊಲೀಸರು ನಿಯೋಜಿಸಿದ್ದರು. ಇದರಲ್ಲಿ ಇತರ ಪಡೆಗಳಿಂದ ಕರೆಸಲಾದ 500 ಅಧಿಕಾರಿಗಳೂ ಸೇರಿದ್ದಾರೆ. ಎರಡು ಪ್ರತಿಭಟನಗಳನ್ನು ನಿರ್ವಹಿಸುವುದರ ಜೊತೆಗೆ, ನಗರದಾದ್ಯಂತ ವಿವಿಧ ಉನ್ನತ ಮಟ್ಟದ ಫುಟ್‌ಬಾಲ್ ಪಂದ್ಯಗಳು ಮತ್ತು ಸಂಗೀತ ಕಚೇರಿಗಳನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಸಹ ಪೊಲೀಸರಿಗೆ ವಹಿಸಲಾಗಿತ್ತು. ಇದರಿಂದಾಗಿ ಪೊಲೀಸರು ತೀವ್ರ ಹರಸಾಹಸ ಪಡಬೇಕಾಯಿತು.
ಅಂದಹಾಗೆ, ಯುಕೆ ಪ್ರಸ್ತುತ ಆರ್ಥಿಕ ಸಂಕಷ್ಟದ ಸುಳಿಯಲ್ಲಿದೆ. ಈ ಬಗ್ಗೆ ಭಾರೀ ಕಳವಳಗಳ ವ್ಯಕ್ತವಾಗುತ್ತಿದೆ. ಆದರೆ, ವಲಸೆಯು ಬ್ರಿಟಿಷ್ ರಾಜಕೀಯ ಚರ್ಚೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದೆ. ಯುಕೆ ದಾಖಲೆಯ ಸಂಖ್ಯೆಯ ವಲಸೆ ಅರ್ಜಿಗಳನ್ನು ಕಂಡಿದ್ದು, ಈ ವರ್ಷ ಇಲ್ಲಿಯವರೆಗೆ 28,000 ಕ್ಕೂ ಹೆಚ್ಚು ವಲಸಿಗರು ಜಲ ಮಾರ್ಗದ ಮೂಲಕ ಸಣ್ಣ ದೋಣಿಗಳಲ್ಲಿ ಆಗಮಿಸಿದ್ದಾರೆ. (ಏಜೆನ್ಸೀಸ್)