ನ್ಯೂಸ್

ತೆಲಂಗಾಣಕ್ಕೆ ನೀರು ಬಿಟ್ಟಿದ್ದಕ್ಕೆ ಆಕ್ರೋಶ

ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಸವನಬಾಗೇವಾಡಿ ಮಂಡಲ ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಚಂದ್ರಗಿರಿಯ ಚಂದ್ರಮ್ಮದೇವಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಬಿಜೆಎನ್​ಎಲ್​ ಎಂಡಿ ಕಚೇರಿಗೆ ಆಗಮಿಸಿ ಮುಖ್ಯಅಭಿಯಂತರ ಡಿ. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಕೇವಲ 15 ಕಿ.ಮೀ ದೂರದ ನಿಡಗುಂದಿ ತಾಲೂಕಿನ ಅಂಗಡಗೇರಿ, ಬೀರಲದಿನ್ನಿ, ಗೊಳಸಂಗಿ, ವಂದಾಲ, ಬೇನಾಳ ಆರ್​ಎಸ್​, ಚಿಮ್ಮಲಗಿ, ತೆಲಗಿ ವ್ಯಾಪ್ತಿಯಲ್ಲಿ 90 ಸಾವಿರ ಎಕರೆ ಜಮೀನು ನೀರಾವರಿ ವಂಚಿತವಾಗಿದು,್ದ ಈ ಭಾಗದಲ್ಲಿ ಎರಡು ಕಡೆ ಕಾಲುವೆ ನಿರ್ಮಿಸಿ ಜಮೀನುಗಳಿಗೆ ನೀರು ಹರಿಸಬೇಕು. ಕೊಲ್ಹಾರ ಪಟ್ಟಣದ ಪಶ್ಚಿಮ ದಿಕ್ಕಿಗೆ ವಿಜಯಪುರ&ಹುಬ್ಬಳ್ಳಿ ರಾಜ್ಯ ಹೆದ್ದಾರಿ ಸಮೀಪದ ಮಹಾದೇವಪ್ಪ ದೇವಸ್ಥಾನ ಬಳಿಯ ಜಮೀನುಗಳಿಗೂ ನೀರಾವರಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಆಲಮಟ್ಟಿ ಡ್ಯಾಂನಿಂದ 10 ಟಿಎಂಸಿ ನೀರನ್ನು ತೆಲಂಗಾಣ ರಾಜ್ಯಕ್ಕೆ ಬಿಟ್ಟಿರುವುದು ಈ ಭಾಗದ ಸಂತ್ರಸ್ತ ರೈತರಿಗೆ ಅನ್ಯಾಯವಾಗಿದೆ. ಇನ್ಮುಂದೆ ಅನ್ಯರಾಜ್ಯಕ್ಕೆ ನೀರು ಬಿಡಬಾರದು. ಆಲಮಟ್ಟಿ ಡ್ಯಾಂ ನೀರನ್ನು ಮುಳವಾಡ ಏತ ನೀರಾವರಿ ಮೊದಲ ಹಂತದ ಹಣಮಾಪುರ ಜಾಕ್​ವೆಲ್​ ಪಶ್ಚಿಮ ಮತ್ತು ಪೂರ್ವ ಕಾಲುವೆಗಳಿಗೆ ಜೂ.15ರ ವರೆಗೆ 15 ದಿನಗಳಿಗೊಮ್ಮೆ ನೀರು ಹರಿಸಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಸೂತಿ ಜಾಕ್​ವೆಲ್​ ಮತ್ತು ಚಿಮ್ಮಲಗಿ ಏತ ನೀರಾವರಿ ಕಾಲುವೆಗಳಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂಗಳ ನೀರಾವರಿ ಯೋಜನೆಗಳಿಗೆ ಈಗಾಗಲೇ ಹಂಚಿಕೆಯಾದ ನೀರನ್ನು ಪರಿಷ್ಕರಿಸಿ ಎರಡೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ಯೋಜನೆಗಳಿಗೆ ಯೋಜನಾವಾರು ಹಂಚಿಕೆ ಮಾಡಬೇಕು. ಯುಕೆಪಿ ನಿರಾಶ್ರಿತರಿಗೆ ಭೂಅರ್ಚನೆಯ ಅಧಿಸೂಚನೆ ದಿನಾಂಕ ಪರಿಗಣಿಸದೆ ಮುಳುಗಡೆ ಪ್ರಮಾಣ ಪತ್ರ ನೀಡಬೇಕು ಅಥವಾ ಸರ್ಕಾರಿ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು. ಹೈದರಾಬಾದ್​ ಕರ್ನಾಟಕದ ಆರ್ಟಿಕಲ್​ 371(ಜೆ) ಅಡಿಯಲ್ಲಿ ಮಂಜೂರಾಗುವ ಸರ್ಕಾರಿ ನೇಮಕಾತಿಯಲ್ಲಿ ಮುಳುಗಡೆ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ, ಬಸವರಾಜ ಬಾಗೇವಾಡಿ, ಕಸ್ತೂರಿ ಎಸ್​. ಬೆಳ್ಳುಬ್ಬಿ, ಬಿಜೆಪಿ ಮಂಡಲ ಅಧ್ಯ ಸಿದ್ರಾಮ ಕಾಖಂಡಕಿ, ಮಲ್ಲನಗೌಡ ರಾಯಗೊಂಡ, ವಿಜಯ ಪೂಜಾರ, ಆನಂದ ಬಿಸ್ಟಗೊಂಡ, ಬಿ.ಎಚ್​. ಗಣಿ, ಮುತ್ತು ಕಾಜಗಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಜಗದೀಶ ಸುಣಗದ, ಅಖಿಲಗೌಡ ಪಾಟೀಲ, ರಾಜೇಶ್ವರಿ ಯರನಾಳ, ಸಂಗಪ್ಪ ಮುರನಾಳ, ಈರಣ್ಣ ಬಳವಾಟ, ಸಂತೋಷ ನಾಯಕ, ರಾಜು ನದ್​ಾ, ಅಂದಾನೆಪ್ಪ ತೊಳಮಟ್ಟಿ, ಬಾಲಚಂದ್ರ ನಾಗರಾಳ ಇತರರಿದ್ದರು.