ನ್ಯೂಸ್

ಎಸ್‌ಸಿ ಒಳಮೀಸಲಾತಿ ವಿಳಂಬಕ್ಕೆ ಆಕ್ರೋಶ | Madiga organisations protest

ಮೃತ್ಯುಂಜಯ ಕಪಗಲ್

ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ವಿಳಂಬ ಖಂಡಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದ ಅರೆಬೆತ್ತಲೆ ಪ್ರತಿಭಟನೆ ಶುಕ್ರವಾರ ನಡೆಯಿತು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿ ಹಲವು ಜಿಲ್ಲೆಗಳಲ್ಲಿ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಒಕ್ಕೂಟದ ಚಳವಳಿಗೆ ಬಿಜೆಪಿ ನಾಯಕರು ಸಾಥ್ ನೀಡಿದರು. ಸಾಮಾಜಿಕ ನ್ಯಾಯ, ದೀನ-ದಲಿತರ ಬಗ್ಗೆ ಕಾಂಗ್ರೆಸ್ ಸರ್ಕಾರದ ಕಾಳಜಿ ಭಾಷಣಕ್ಕೆ ಸೀಮಿತವಾಗಿದೆ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂಬ ಭರವಸೆ ನೀಡಿದ್ದರು.

ಎರಡು ವರ್ಷಗಳ ಕಳೆದರೂ ಈಡೇರಿಸಲಿಲ್ಲ. ಸುಪ್ರೀಂ ಕೋರ್ಟ್ ಅದೇಶಿಸಿ ಒಂದು ವರ್ಷವಾಗಿದ್ದು, ಅಧ್ಯಯನ, ಸಮೀಕ್ಷೆ ಹಾಗೂ ದತ್ತಾಂಶಗಳ ಸಂಗ್ರಹ ಹೆಸರಿನಲ್ಲಿ ಕಾಲ ಕಳೆದಿದೆ. ಶೋಷಿತರ ವೋಟು ಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಶೋಷಿತರನ್ನು ಕಡೆಗಣಿಸಿದೆ ಎಂದು ಕಿಡಿಕಾರಿದರು.

ಅಸಹಕಾರ ಚಳವಳಿ ಎಚ್ಚರಿಕೆ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಕೂಡಲೇ ಒಳಮೀಸಲಾತಿ ಜಾರಿಗೊಳಿದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಮಾದಿಗರಿಂದ ಅಸಹಕಾರ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಕ್ಷಬೇಧ ಮರೆತು ಹೋರಾಟ ನಡೆಯುತ್ತಿದೆ. ಬಿಜೆಪಿ ಹೋರಾಟವಲ್ಲ, ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ, ಕುರ್ಚಿ ಮುಖ್ಯವೋ ಅಥವಾ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ಧಿ ಮುಖ್ಯವೋ ? ಎಂದು ಕೇಳಿದರು.

ಮಾದಿಗ ಸಮುದಾಯಗಳಲ್ಲಿ ಜಾಗೃತಿ ಮೂಡಿದ್ದರಿಂದ 26 ಜಿಲ್ಲೆಗಳಲ್ಲಿ ಹೋರಾಟ ನಡೆದಿದೆ. ರಾಜ್ಯ ಸರ್ಕಾರ ಹೀಗೆಯೇ ಕಾಲಕಳೆದರೆ ಮಾದಿಗರ ತಾಳ್ಮೆ ಪರೀಕ್ಷಿಸಿದಂತಾಗುತ್ತದೆ. ಸಮುದಾಯದ ಜನ ಬೀದಿಗೆ ಇಳಿದರೆ ಕಾಂಗ್ರೆಸ್ ಅಧಿಕಾರಕ್ಕೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಎ.ನಾರಾಯಣಸ್ವಾಮಿ ಗುಡುಗಿದರು.

ಈ ಪ್ರತಿಭಟನೆಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.