Female journalists: ಆರು ದಿನಗಳ ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ಥಾನದ ತಾಲಿಬಾನ್ ಸರ್ಕಾರದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಇಂದು(ಅ. 10) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಆದರೆ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿರ್ಬಂಧಿಸಲಾಗಿತ್ತು ಎಂದು ವರದಿಯಾಗಿದ್ದು, ಮಹಿಳಾ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಅಮೀರ್ ಖಾನ್ ಮುತ್ತಕಿ ಬಳಿಕ ನಿರ್ಣಯಕ ಸುದ್ದಿಗೋಷ್ಠಿ ನಡೆಸಿದ್ದರು. ಅದರಲ್ಲಿ ಪ್ರಮುಖ ಸುದ್ದಿವಾಹಿನಿಗಳ ಹಿರಿಯ ಮಹಿಳಾ ವರದಿಗಾರರು, ದಿ ಇಂಡಿಪೆಂಡೆಂಟ್ ವರದಿಗಾರ್ತಿ ಸೇರಿ ಮಹಿಳಾ ಪತ್ರಕರ್ತರಿಗೆ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇನ್ನು ಈ ಕ್ರಮವನ್ನು ಖಂಡಿಸಿರುವ ಅನೇಕ ಪತ್ರಕರ್ತರು ಇದು ತಾಲಿಬಾನ್ನ ಸ್ತ್ರೀದ್ವೇಷದ ಪ್ರತಿಬಿಂಬ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್, ಅಲ್ಲಿನ ಮಹಿಳೆಯರ ವಿರುದ್ಧದ ಸ್ತ್ರೀ ದ್ವೇಷ ನೀತಿಗಳಿಗೆ ಹೆಸರುವಾಸಿಯಾಗಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಇಂತಹ ತಾರತಮ್ಯ ನೀತಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಪತ್ರಕರ್ತರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಲೇಖಕಿ ಮತ್ತು ಪತ್ರಕರ್ತೆ ನಯನಿಮಾ ಬಸು, ಭಾರತ ಸರ್ಕಾರದ ಮೂಗಿನ ನೇರಕ್ಕೆ, ರಾಜಧಾನಿಯ ಹೃದಯ ಭಾಗದಲ್ಲೇ ಅಫ್ಘಾನ್ ವಿದೇಶಾಂಗ ಸಚಿವೆ ಮುತ್ತಕಿ ಅವರು ಉದ್ದೇಶಪೂರ್ವಕವಾಗಿ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದನ್ನು ಹೇಗೆ ಅನುಮತಿಸಬಹುದು? ಪ್ರಾತಿನಿಧ್ಯಕ್ಕೆ ಇಂತಹ ಅತಿರೇಕದ ನಿರ್ಲಕ್ಷ್ಯವನ್ನು ಯಾರು ಅನುಮೋದಿಸಿದರು? ಎಂದು ಪ್ರಶ್ನಿಸಿದ್ದಾರೆ.
ದಿ ಹಿಂದೂ ಪತ್ರಿಕೆಯ ಸುಹಾಸಿನಿ ಹೈದರ್ ಸಹ ಕಿಡಿಕಾರಿದ್ದು, ಹಾಸ್ಯಾಸ್ಪದ ಸಂಗತಿಯೆಂದರೆ, ಸರ್ಕಾರವು ತಾಲಿಬಾನ್ ನಿಯೋಗವನ್ನು ಪೂರ್ಣ ಅಧಿಕೃತ ಶಿಷ್ಟಾಚಾರದೊಂದಿಗೆ ಆತಿಥ್ಯ ವಹಿಸಿದೆ. ತಾಲಿಬಾನ್ನ ಮಹಿಳೆಯರ ವಿರುದ್ಧದ ಅಸಹ್ಯಕರ ಮತ್ತು ಕಾನೂನುಬಾಹಿರ ತಾರತಮ್ಯವನ್ನು ಭಾರತಕ್ಕೆ ತರಲು ಅನುಮತಿಸಲಾಗಿದೆಯೇ ಎಂದಿದ್ದಾರೆ.
ಮಹಿಳಾ ಪತ್ರಕರ್ತರ ನಿರ್ಬಂಧಿಸಿರುವುದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ (MEA) ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)