ಬೆಂಗಳೂರು: ಸರ್ಕಾರಕ್ಕೆ ಔಷಧ ಪೂರೈಸಿದ ಔಷಧ ಕಂಪನಿಗಳು ತಪ್ಪು ಮಾಡಿರುವುದು ಪತ್ತೆಯಾದರೂ ಅಂತಹ ಕಂಪನಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ. ಫಾರ್ಮಾಸ್ಯುಟಿಕಲ್ಸ್ ಕಂಪನಿಗಳನ್ನು ರಕ್ಷಿಸುವ ಕಾನೂನುಗಳಾಗಿ ಹೋಗಿವೆ ಎಂಬ ಕಟು ಸತ್ಯವನ್ನು ಆರೋಗ್ಯ ಮತ್ತು ಕುಟುಂಬ ದಿನೇಶ್ ಗುಂಡೂರಾವ್ ಬಹಿರಂಗಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತಕ್ಕೆ ಬಿಜೆಪಿಯವರು ಖಂಡಿತ ದೂರು ನೀಡಲಿ, ಅಭ್ಯಂತರವೇನಿಲ್ಲ. ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ರಾಜೀನಾಮೆ ನೀಡಲೂ ಸಿದ್ಧ. ಈ ವಿಷಯದಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ನನ್ನ ರಾಜೀನಾಮೆಯಿಂದ ಎಲ್ಲವೂ ಸರಿಯಾಗುತ್ತದೆ ಎಂದಾದರೆ ರಾಜೀನಾಮೆ ನೀಡುವೆ. ಇದು ಜೀವದ ವಿಚಾರವಾಗಿದ್ದು, ಪ್ರಕರಣದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಪ್ರತಿಪಕ್ಷಗಳ ಸಹಕಾರವೂ ಅಗತ್ಯವೆಂದರು.
ಬಳ್ಳಾರಿಯಲ್ಲಿ ಮೊನ್ನೆ ಒಂಭತ್ತು ಜನರಿಗೆ ಸಮಸ್ಯೆಯಾಗಿತ್ತು. ಈ ಪೈಕಿ ನಾಲ್ವರು ತೀರಿಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಐದನೇಯವರು ಮೃತಪಟ್ಟಿದ್ದಾರೆ. ಅದೇ ಬ್ಯಾಚ್ ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಇವರಿಗೆ ಬೇರೆ ಆರೋಗ್ಯ ಸಮಸ್ಯೆಯಿತ್ತು ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಗುಣಮುಖರಾಗುತ್ತಿದ್ದರು. ನಿನ್ನೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಬಾಣಂತಿಯರ ಸಾವು ಪ್ರಕರಣದಲ್ಲಿ ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ 327 ಬಾಣಂತಿಯರ ಸಾವುಗಳಾಗಿವೆ. ಎಲ್ಲ ಪ್ರಕರಣಗಳನ್ನು ಪರಿಶೀಲಿಸಲು ಸೂಚಿಸಿದ್ದೇವೆ. ಇಂಥ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಲೇಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಪುನರುಚ್ಚರಿಸಿದರು.