PM Modi:ಭಾರತದ ನಿಜವಾದ ಶತ್ರು ಎಂದರೆ ಬೇರೆ ದೇಶಗಳ ಮೇಲಿನ ಅವಲಂಬನೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆಪ್ಟೆಂಬರ್,20) ಹೇಳಿದ್ದಾರೆ. ಅಲ್ಲದೆ, ರಾಷ್ಟ್ರೀಯ ಶಕ್ತಿ ಮತ್ತು ಜಾಗತಿಕ ಗೌರವವನ್ನು ಗಳಿಸಬೇಕಾದರೆ ಸ್ವಾವಲಂಬನೆಯ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಗುಜರಾತ್ನ ಭಾವನಗರದಲ್ಲಿ ಮಾತನಾಡಿದ ಮೋದಿ, ಜಗತ್ತಿನಲ್ಲಿ ನಮಗೆ ಯಾವುದೇ ಪ್ರಮುಖ ಶತ್ರುಗಳಿಲ್ಲ. ಆದರೆ, ನಮ್ಮ ಏಕೈಕ ಶತ್ರು ಇತರ ದೇಶಗಳ ಮೇಲಿನ ನಮ್ಮ ಅವಲಂಬನೆ. ಇದು ನಮ್ಮ ದೊಡ್ಡ ಶತ್ರು, ಮತ್ತು ನಾವು ಒಟ್ಟಾಗಿ ಭಾರತದ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಸೂಚಿಸಿದ್ದಾರೆ.
ಆತ್ಮನಿರ್ಭರತೆಯ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ವಿದೇಶಿ ಅವಲಂಬನೆ ಹೆಚ್ಚಾದಷ್ಟೂ, ರಾಷ್ಟ್ರದ ವೈಫಲ್ಯ ಹೆಚ್ಚಾಗುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ನಡೆದರೆ, ಸೌದಿ ಅರೇಬಿಯಾ ನಮಗೆ ಬೆಂಬಲ ನೀಡುತ್ತದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್| Khawaja Asif
ಮುಂದುವರೆದು ಮಾತನಾಡಿದ ಮೋದಿ, ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 1.4 ಶತಕೋಟಿ ದೇಶವಾಸಿಗಳ ಭವಿಷ್ಯವನ್ನು ನಾವು ಇತರರಿಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಭಾರತವು ತನ್ನ ಅಭಿವೃದ್ಧಿಗಾಗಿ ಇತರರನ್ನು ಅವಲಂಬಿಸಲು ಸಾಧ್ಯವಿಲ್ಲ. ಅಲ್ಲದೆ, ಭವಿಷ್ಯದ ಪೀಳಿಗೆಯನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ನೂರು ದುಃಖಗಳಿಗೆ ಒಂದೇ ಒಂದು ಔಷಧಿ ಇದೆ, ಅದು ಸ್ವಾವಲಂಬಿ ಭಾರತ ಎಂದು ಮೋದಿ ಸೂಚಿಸಿದ್ದಾರೆ.
ವಿಪಕ್ಷದ ವಿರುದ್ಧ ಗುಡುಗಿದ ಮೋದಿ, ದೇಶದ ಹಡಗು ವಲಯವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ. ದೇಶೀಯ ಹಡಗು ನಿರ್ಮಾಣಕ್ಕಿಂತ ವಿದೇಶಿ ಹಡಗುಗಳ ಮೇಲೆ ಹೆಚ್ಚಿನ ಗಮನ ಹರಿಸುವುದರಿಂದ ಭಾರತದ ಹಡಗು ನಿರ್ಮಾಣ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಯಿತು ಎಂದು ಮೋದಿ ತಿಳಿಸಿದ್ಧಾರೆ.
ಅಲ್ಲದೆ, ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಹಡಗು ನಿರ್ಮಾಣದತ್ತ ಗಮನಹರಿಸುವ ಬದಲು, ವಿದೇಶಿ ಹಡಗುಗಳಿಗೆ ಬಾಡಿಗೆ ಪಾವತಿಸಲು ಆದ್ಯತೆ ನೀಡಿದರು. ಭಾರತದಲ್ಲಿ ಹಡಗು ನಿರ್ಮಾಣ ಪರಿಸರ ವ್ಯವಸ್ಥೆ ಕುಸಿದು ಬಿದ್ದಿತು. ನಮ್ಮ ವ್ಯಾಪಾರದ 90% ರಷ್ಟು ವಿದೇಶಿ ಹಡಗುಗಳ ಮೇಲೆ ಅವಲಂಬಿತರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. (ಏಜೆನ್ಸೀಸ್)