Osey Ramulamma Song: ಹಿರಿಯ ನಟಿ ವಿಜಯಶಾಂತಿ ನೆನಪಾದಾಗಲೆಲ್ಲಾ ಮೊದಲು ಕಣ್ಣಮುಂದೆ ಬರುವುದು 1997ರ 'ಒಸೆಯ್ ರಾಮುಲಮ್ಮ' ಸಿನಿಮಾ ಮತ್ತು ಅದರ ಜನಪ್ರಿಯ ಟೈಟಲ್ ಸಾಂಗ್. ದಾಸರಿ ನಾರಾಯಣ ರಾವ್ ನಿರ್ದೇಶಿಸಿದ್ದ ಈ ಚಿತ್ರದ ಸೂಪರ್ ಹಿಟ್ ಹಾಡನ್ನು 29 ವರ್ಷಗಳ ಬಳಿಕ ರಶ್ಮಿಕಾ ಮಂದಣ್ಣ ಅಭಿನಯದ 'ಮೈಸಾ' (Mysaa) ಚಿತ್ರಕ್ಕಾಗಿ ರವೀಂದ್ರ ಪುಲ್ಲೆ ಮತ್ತೆ ರೂಪಿಸಿದ್ದಾರೆ. ಇದರ ಜೊತೆಗೆ, ಮೂಲ ಹಾಡಿಗೆ ಹಾಡಿ ಸಂಗೀತ ನೀಡಿದ್ದ ವಂದೇಮಾತರಂ ಶ್ರೀನಿವಾಸ್ ಅವರೇ ಈ ಮರುಸೃಷ್ಟಿಯ ಹಾಡಿನ ನೇತೃತ್ವ ವಹಿಸಿರುವುದು ಮತ್ತೊಂದು ವಿಶೇಷ.
ಹೈದರಾಬಾದ್‌ನಲ್ಲಿ ನಡೆದ ಹಾಡಿನ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ಮಿಕಾ, ಐಕಾನಿಕ್ ಹಾಡನ್ನು ಮರುಸೃಷ್ಟಿಸುವಾಗ ತಮಗಿದ್ದ ಭಯವನ್ನು ಹಂಚಿಕೊಂಡಿದ್ದಾರೆ. ‘ರವೀಂದ್ರ ಸರ್ ಬಂದು 'ಒಸೆಯ್ ರಾಮುಲಮ್ಮ' ಹಾಡನ್ನು ರೀಕ್ರಿಯೇಟ್ ಮಾಡುತ್ತಿದ್ದೇವೆ ಎಂದಾಗ ನನಗೆ ನಿಜಕ್ಕೂ ನಡುಕ ಹುಟ್ಟಿತ್ತು. ಇದು ಐಕಾನಿಕ್ ಸಿನಿಮಾದ ಐಕಾನಿಕ್ ಹಾಡಾಗಿದ್ದು, ಅದನ್ನು ಮರುಸೃಷ್ಟಿಸುವುದು ದೊಡ್ಡ ಜವಾಬ್ದಾರಿಯಾಗಿತ್ತು. ಮೂಲ ಹಾಡಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲವಾದರೂ, ನಮ್ಮ ಕೈಲಾದಷ್ಟು ನ್ಯಾಯ ಒದಗಿಸಿದ್ದೇವೆ ಎಂಬ ಸಮಾಧಾನವಿದೆ’ ಎಂದು ರಶ್ಮಿಕಾ ಹೇಳಿದ್ದಾರೆ.
ಮೂಲ ಸಂಗೀತ ನಿರ್ದೇಶಕ ವಂದೇಮಾತರಂ ಶ್ರೀನಿವಾಸ್ ಈ ಪ್ರಾಜೆಕ್ಟ್‌ಗೆ ಒಪ್ಪಿಕೊಂಡಿದ್ದಕ್ಕೆ ರಶ್ಮಿಕಾ ಮನತುಂಬಿ ಧನ್ಯವಾದ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯಶಾಂತಿಯವರನ್ನು ನೆನೆಸಿಕೊಂಡ ಅವರು, ‘ವಿಜಯಶಾಂತಿ ಮೇಡಂ ಇವತ್ತು ನೀವು ಇಲ್ಲಿ ಬಂದಿದ್ದರೆ ನಮಗೆ ಸಿಕ್ಕಾಪಟ್ಟೆ ಖುಷಿಯಾಗುತ್ತಿತ್ತು. ಇದು ನಿಮಗೆ ನಮ್ಮ ಕಡೆಯಿಂದ ಒಂದು ಪುಟ್ಟ ಗೌರವ, ಈ ಹಾಡು ನಿಮಗೆ ಇಷ್ಟ ಆಗಿದೆ ಅಂತ ಅಂದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
ಅಲ್ಲದೆ, ಎಕ್ಸ್ (ಟ್ವಿಟರ್) ಖಾತೆಯಲ್ಲೂ ಪೋಸ್ಟ್ ಮಾಡಿರುವ ರಶ್ಮಿಕಾ, ’ಕೆಲವು ಹಾಡುಗಳು ಎಂದಿಗೂ ಅಜರಾಮರ, ಅದರಲ್ಲಿ ಒಸೆಯ್ ರಾಮುಲಮ್ಮ ಕೂಡ ಒಂದು. ರಾಮುಲಮ್ಮ ಪ್ರತಿನಿಧಿಸುವ ಶಕ್ತಿ, ಧೈರ್ಯ ಮತ್ತು ಕಿಚ್ಚು ತುಂಬಾ ವಿಶೇಷವಾದದ್ದು ಎಂದಿದ್ದಾರೆ
ಇನ್ನೂ, ಮುಂದುವರಿದಂತೆ ‘ಸರಿಯಾದುದರ ಪರ ನಿಲ್ಲುವ ಹೆಣ್ಣನ್ನು ವಿಜಯಶಾಂತಿ ಮೇಡಂ ನಮಗೆ ನೀಡಿದ್ದಾರೆ. 25 ವರ್ಷಗಳ ನಂತರ ವಂದೇಮಾತರಂ ಶ್ರೀನಿವಾಸ್ ಸರ್ ಮತ್ತೆ ಇದನ್ನು ಹಾಡಿರುವುದು ಇನ್ನಷ್ಟು ಸುಂದರವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ತೆಲಂಗಾಣದ ಊಳಿಗಮಾನ್ಯ ಹಿನ್ನೆಲೆಯ ಹಳ್ಳಿಯಲ್ಲಿ ನಡೆಯುವ ಈ ಕಥೆಯು, 13ನೇ ವಯಸ್ಸಿನಲ್ಲೇ ಪ್ರಬಲ ಜಾತಿಯ ಜಮೀನ್ದಾರನಿಂದ ಶೋಷಣೆಗೆ ಒಳಗಾಗುವ ದಲಿತ ಮಹಿಳೆಯ ಹೋರಾಟವನ್ನು ತೋರಿಸುತ್ತದೆ. ತನ್ನ ಮತ್ತು ಮಗುವಿನ ಹತ್ಯೆ ಪ್ರಯತ್ನದಿಂದ ಪಾರಾಗಿ ನಕ್ಸಲರ ಆಶ್ರಯ ಪಡೆಯುವ ರಾಮುಲಮ್ಮ, ನ್ಯಾಯಕ್ಕಾಗಿ ನಕ್ಸಲ್ ಚಳವಳಿಗೆ ಸೇರುತ್ತಾಳೆ. ತೆಲಂಗಾಣದ ಜಾನಪದ ಶೈಲಿಯಲ್ಲಿದ್ದ ಈ ಹಾಡು, ಇಂದಿಗೂ ಮಹಿಳಾ ಸಬಲೀಕರಣ ಮತ್ತು ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟದ ಗೀತೆಯಾಗಿ ಉಳಿದಿದೆ.