ನವದೆಹಲಿ: ಆಲೂಗಡ್ಡೆಯಿಂದ ಚಿನ್ನ ತೆಗೆಯುತ್ತೇವೆ ಎಂದು ಹೇಳಿದ್ದು ಯಾರು ಎಂದರೆ ಹಲವರು ಥಟ್ ಎಂದು ಉತ್ತರ ಹೇಳಿಬಿಡುತ್ತಾರೆ. ಆದರೆ ಇದೀಗ ಅದು ರಾಹುಲ್ ಗಾಂಧಿ ಹೇಳಿಕೆಯೋ ಅಥವಾ ನರೇಂದ್ರ ಮೋದಿ ಹೇಳಿದ್ದೋ ಎಂಬ ಗೊಂದಲವೊಂದು ಮೂಡಿ ಮರೆಯಾಗಿದೆ.
2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, 'ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಲ್ಲಿ ಚಿನ್ನ ಬರುವಂಥ ಮಷಿನ್ ಹಾಕುತ್ತೇವೆ' ಎಂಬುದಾಗಿ ಹೇಳಿದ್ದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕೊಂದಕ್ಕೆ, '..ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಮತ್ತೊಂದು ಕಡೆಯಲ್ಲಿ ಚಿನ್ನ ಬರುತ್ತದೆ..' ಎಂದು ಅವರೇ ಹೇಳಿದ ಹಾಗನಿಸುವಂತೆ ಕಾಣಿಸುವ/ಕೇಳಿಸುವ ವಿಡಿಯೋವೊಂದನ್ನು ಕಾಂಗ್ರೆಸ್ ಬೆಂಬಲಿಗರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಸದ್ಯ 3 ಕಾಯ್ದೆಗಳ ತಿದ್ದುಪಡಿ ವಿರುದ್ಧ ಕ್ಯಾಂಪೇನ್ ಮಾಡುವ ಹಿನ್ನೆಲೆಯಲ್ಲಿ ಅವರು ಈ ವಿಡಿಯೋ ಬಳಸಿದ್ದಾರೆ. ಈ ಮೂಲಕ ಹಲವರು, ಮೋದಿಯವರೇ ಮೊದಲು ಆ ಹೇಳಿಕೆ ನೀಡಿದ್ದು ಎಂದು ಬಿಂಬಿಸಲು ಯತ್ನಿಸಿದ್ದರು. ಈ ಬಗ್ಗೆ ಆಲ್ಟ್ನ್ಯೂಸ್ ಸಂಸ್ಥೆ ಫ್ಯಾಕ್ಟ್ ಚೆಕ್ ಮಾಡಿ, ಅಸಲಿಯತ್ತು ಏನೆಂಬುದನ್ನು ಬಹಿರಂಗಪಡಿಸಿದೆ.
2019ರ ಏಪ್ರಿಲ್ 27ರಂದು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಿದ್ದ ಮೋದಿಯವರ ಭಾಷಣದ ತುಣುಕಿಗೆ, ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ ಭಾಸವಾಗುವಂತೆ ಎಡಿಟ್ ಮಾಡಿ ಗೊಂದಲ ಮೂಡಿಸಲಾಗಿದೆ. ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ ಚೆಕ್ ತಿಳಿಸಿದೆ. (ಏಜೆನ್ಸೀಸ್)