ಮೂಡಿಗೆರೆಯ ಮಹಾಂತೀನ ಮಠ ಸಭಾಂಗಣದಲ್ಲಿ ನಡೆದ ಧಾರ್ಮಿಕ ದುಂದುಭಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವನ್ನು ಸನ್ಮಾನಿಸಲಾಯಿತು. ಬಿ.ಎಸ್.ಓಂಕಾರ್, ಜಿ.ಎಸ್.ಮಹೇಶ್ವರಯ್ಶ ಶಾಸ್ತ್ರಿ, ರಾಜಲಕ್ಷ್ಮಿ, ಶಾಲಿನಿ ಅನಿಲ್‌ಕುಮಾರ್ ಇದ್ದರು.  
ನ್ಯೂಸ್

ಧಾರ್ಮಿಕ ಆಚರಣೆಗೆ ಉಳಿವಿಗೆ ಸಂಘಟಿತರಾಗಿ

ಮೂಡಿಗೆರೆ: ವೀರಶೈವ ಲಿಂಗಾಯತ ಅತ್ಯಂತ ಪ್ರಸಿದ್ಧ ಧಾರ್ಮಿಕ ಪರಂಪರೆಯುಳ್ಳ ಧರ್ಮವಾಗಿದ್ದು, ಧರ್ಮದ ಧಾರ್ಮಿಕ ಆಚರಣೆ ಉಳಿವಿಗೆ ಯುವ ಜನತೆ ಸಂಘಟಿತರಾಗಿ ಶ್ರಮಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್ ಹೇಳಿದರು.
ಮಹಂತಿನ ಮಠ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಗೋಣಿಬೀಡಿನ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಶ್ರಾವಣ ಮಾಸದ ಧಾರ್ಮಿಕ ದುಂಧುಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯವನ್ನು ಒಗ್ಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ವೀರಶೈವ ಸಮಾಜಕ್ಕೆ ಹೆಚ್ಚಿನ ಶಕ್ತಿ ಬರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ವರ್ಗ ಹಿಂದೆ ಬಿದ್ದಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ವಚನ ರಚನೆಕಾರ ರುದ್ರಮೂರ್ತಿ ಎಲೆರಾಂಪುರ ಮಾತನಾಡಿ, 6ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು ಸಮಾಜವನ್ನು ಒಟ್ಟುಗೂಡಿಸುವ ವಚನಗಳನ್ನು ರಚಿಸಿ ವಚನ ಕ್ರಾಂತಿ ಮಾಡಿದ್ದರಿಂದ ಸಮಾಜ ಸುಭಿಕ್ಷವಾಗಿದೆ. ವಚನ ಸಾಹಿತ್ಯಕ್ಕೆ 800 ವರ್ಷದ ಇತಿಹಾಸವಿದೆ. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ತನ್ನದೇ ನೆಲಗಟ್ಟನ್ನು ಹೊಂದಿದೆ. ವಚನಗಳನ್ನು ರಕ್ಷಣೆ ಮಾಡಿ ಬದುಕಿಗೆ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ವಿಶ್ವಕ್ಕೆ ಸಮಾನತೆ ಸಾರಿದ ಧರ್ಮವಾಗಿದೆ. ಈ ಧರ್ಮದ ಆಶಯ ಮತ್ತು ಆಚಾರ ವಿಚಾರಗಳ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ರಾಜೇಶ್ವರಿ ನಾಗರಾಜ್ಗೆ ಪುಷ್ಪಗಿರಿ ಸಮಾಜ ಸೇವಾ ರತ್ನ ಹಾಗೂ ರುದ್ರಮೂರ್ತಿ ಎಲೆರಾಂಪುರ ಅವರಿಗೆ ಪುಷ್ಪಗಿರಿ ವಿಜ್ಞಾನ ಕೌಶಲ್ಯ ರತ್ನ, ಜಿ.ಎಸ್.ಮಹೇಶ್ವರಯ್ಯ ಶಾಸ್ತ್ರಿ ಅವರಿಗೆ ಪುಷ್ಪಗಿರಿ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಿ.ಎಸ್.ಓಂಕಾರ್, ಧಾರ್ಮಿಕ ಮುಖಂಡ ಜಿ.ಎಸ್.ಮಹೇಶ್ವರಯ್ಶ ಶಾಸ್ತ್ರಿ, ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಅನಿಲ್‌ಕುಮಾರ್, ಗೌರವಾಧ್ಯಕ್ಷ ಬಿ.ಬಿ.ಬಸವರಾಜ್, ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಉಮಾ ಮೋಹನ್, ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಎಂ.ಸಿ.ಆದರ್ಶ, ಜಿಲ್ಲಾ ಘಟಕದ ನಿರ್ದೇಶಕಿ ಸುಶೀಲ ಶೇಖರ್, ಸಿ.ಸಿ.ರಾಜಣ್ಣ, ಶಕುಂತಲಾ ಪಟೇಲ್, ಮಲ್ಲಿಕಾ ರಾಜೇಶ್, ರವಿ ಪಟೇಲ್ ಇತರರಿದ್ದರು.