ಚಿಕ್ಕಮಗಳೂರಲ್ಲಿ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಕಾರ್ಯಾಗಾರ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಎಚ್.ಸಿ.ರವೀಶ್, ಕೃಷ್ಣಮೂರ್ತಿ ಅರಸ್, ಸತ್ಯನಾರಾಯಣ ಇತತರಿದ್ದರು.  
ನ್ಯೂಸ್

ಕಲಿಕೆಗೆ ಪೂರಕ ಚಟುವಟಿಕೆ ಆಯೋಜಿಸಿ

ಕಿರುವಾರ ಎಸ್.ಸುದರ್ಶನ್

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಪೂರಕ ಚಟುವಟಿಕೆಗಳನ್ನು ನಡೆಸಬೇಕು. ಗಣಿತ, ವಿಜ್ಞಾನ ಕಬ್ಬಿಣದ ಕಡಲೆಯಲ್ಲ ಎಂಬ ಭಾವನೆಯಿಂದ ಹೊರಬರುವ ರೀತಿ ಬೋಧನೆ ಮಾಡಬೇಕು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಮತ್ತು ಜಿಲ್ಲಾ ವಿಜ್ಞಾನ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವಿನ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ಇತ್ತೀಚೆಗೆ ಮಕ್ಕಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳು ಕಬ್ಬಿಣದ ಕಡಲೆಯಂತಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿದರೆ ಈ ವಿಷಯಗಳು ಅತ್ಯಂತ ಸುಲಭವಾಗಲಿದೆ ಎಂದರು.
ಬಿಇಒ ಎಚ್.ಸಿ.ರವೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಅರಿವು ಕಡಿಮೆ. ವಿಜ್ಞಾನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಹೊಸ ಅಲೋಚನೆಗಳತ್ತ ಗಮನ ಹರಿಸುತ್ತಾರೆ ಎಂದು ಹೇಳಿದರು.
ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಯಾವ ತರಬೇತಿಗಳೂ ಇರಲಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಿದ್ದು ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಮೂಡಿಸುವ ಕ್ವಿಜ್, ಮಕ್ಕಳ ವಿಜ್ಞಾನ ಸಮಾವೇಶ ತರಬೇತಿಯನ್ನು ರಾಜ್ಯ ಹಾಗೂ ಜಿಲ್ಲಾ ವಿಜ್ಞಾನ ಪರಿಷತ್ ಹಮ್ಮಿಕೊಳ್ಳಬೇಕು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಕೃಷ್ಣಮೂರ್ತಿ ಅರಸ್, ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ಪ್ರಕಾಶ್, ವಿಜ್ಞಾನ ಕೇಂದ್ರದ ಸಹ ಕಾರ್ಯದರ್ಶಿ ಪ್ರಶಾಂತ್, ಡಯಟ್ ಹಿರಿಯ ಉಪನ್ಯಾಸಕ ಶರಶ್ಚಂದ್ರ, ಪ್ರಶಾಂತ್, ರಸಾಯನಶಾಸ್ತ್ರ ಪ್ರೊ. ಕಂದಗಲ್, ಶಿಕ್ಷಕ ಪ್ರಕಾಶ್ ಇತರರಿದ್ದರು.