ತೀರ್ಥಹಳ್ಳಿಯಲ್ಲಿ ತಾಲೂಕು ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಅವರನ್ನು ಸನ್ಮಾನಿಸಲಾಯಿತು. ಕಿಮ್ಮನೆ ರತ್ನಾಕರ್, ಮಂಜುನಾಥ್, ಅನ್ನಪೂರ್ಣಾ, ಗೀತಾ ರಮೇಶ್, ಸುಮಾ ಸುಬ್ರಮಣ್ಯ ಇತರರಿದ್ದರು.  
ನ್ಯೂಸ್

ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಸಂಘಟಿಸಿ

ತೀರ್ಥಹಳ್ಳಿ: ಕಾಂಗ್ರೆಸ್ ಮಹಿಳಾ ಘಟಕವನ್ನು ತಳಮಟ್ಟದಿಂದ ಸದೃಢವಾಗಿ ಸಂಘಟಿಸುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗಳಿಗೆ ಈಗಿನಿಂದಲೇ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಅವರನ್ನು ಸನ್ಮಾನಿಸಿ ಮಾತನಾಡಿ, ಜಿಪಂ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅನುಭವ ಶ್ವೇತಾ ಬಂಡಿ ಅವರಿಗಿದೆ. ಸಮಾಜ ಸೇವೆ ಮಾಡುತ್ತಿರುವ ಕುಟುಂಬದ ಹಿನ್ನೆಲೆಯಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನದಂತಿವೆ. ಜಾತಿ, ಧರ್ಮ ಭೇದವಿಲ್ಲದೆ ನೀಡಲಾಗುತ್ತಿದೆ. ಉಚಿತ ಯೋಜನೆಯಿಂದ ರಾಜ್ಯ ದಿವಾಳಿಯಾಗಿದೆ ಎಂದು ಆರೋಪಿಸುವ ಬಿಜೆಪಿಯವರು ಯೋಜನೆಗಳಡಿ ಪಡೆದಿರುವ ಸೌಲಭ್ಯ ಹಿಂದಿರುಗಿಸಬೇಕು. ತಲಾ ಆದಾಯದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗೆ ತಯಾರಾಗಬೇಕು ಎಂದು ತಿಳಿಸಿದರು.

ಹರಿಜನರು ಹಿಂದುಗಳೇ ಅಲ್ಲ ಎಂಬ ಭಾವನೆ ಹೊಂದಿರುವ ಬಿಜೆಪಿ ಈ ದೇಶಕ್ಕೆ ವಿರುದ್ಧವಾದ ಸೈದ್ಧಾಂತಿಕ ಚಿಂತನೆಯನ್ನು ಹೊಂದಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಹಿಳಾ ಸಂಘಟನೆ ಮಾಡಬೇಕಿದೆ. ಈ ಕ್ಷೇತ್ರದ ಚುನಾವಣೆಗೆ ಕಳೆದ ಬಾರಿ 1.25 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಿಂದ 204 ಬಸ್‌ಗಳಲ್ಲಿ ಮತದಾರರನ್ನು ಕರೆ ತಂದು ಮತ ಚಲಾವಣೆ ಮಾಡಿಸಿದೆ. ಕೇಂದ್ರದಲ್ಲಿ ಮತಗಳ್ಳತನದಿಂದಲೇ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.

ವರಮಹಾಲಕ್ಷ್ಮೀ ಹಬ್ಬದಾಚರಣೆ, ಚುನಾವಣೆ ಹತ್ತಿರ ಬಂದಾಗ ಮಹಿಳೆಯರಿಗೆ ಬಾಗಿನದೊಂದಿಗೆ ಬೆಳ್ಳಿ ನಾಣ್ಯ ನೀಡುವ ಸಂಪ್ರದಾಯ ಈ ಕ್ಷೇತ್ರದ ಶಾಸಕರದು. ಆದರೆ ಈ ಬಾರಿ ಯಾಕೆ ನೀಡಿಲ್ಲ? ಗೌರಿ ಹಬ್ಬದಲ್ಲಾದರೂ ಬೆಳ್ಳಿ ಕಾಯಿನ್ ನೀಡಬೇಕು ಎಂದು ಲೇವಡಿ ಮಾಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಸೇರಿ ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಈ ಸೌಲಭ್ಯದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ ಪ್ರಯತ್ನ ವ್ಯಾಪಕವಾಗಿ ಆಗಬೇಕಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಪಕ್ಷವನ್ನು ಸದೃಢವಾಗಿ ಸಂಘಟಿಸೋಣ ಎಂದರು.

ಹೊಸನಗರ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಮಾತನಾಡಿ, ಅಧ್ಯಕ್ಷ ಸ್ಥಾನವನ್ನು ಈ ಬಾರಿ ಗ್ರಾಮೀಣ ಭಾಗಕ್ಕೆ ನೀಡಿದ್ದು ಸಂತಸವಾಗಿರುವ ಜತೆಗೆ ಹೊಣೆಗಾರಿಕೆಯನ್ನೂ ಹೆಚ್ಚಿಸಿದೆ. ಪಕ್ಷದಲ್ಲಿ ಹುದ್ದೆಯ ನಿರೀಕ್ಷೆ ಮಾಡುವವರು ಸಂಘಟನೆಗೂ ಒತ್ತು ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಕೆಸ್ತೂರು ಮಂಜುನಾಥ್, ಅಧ್ಯಕ್ಷೆ ಅನ್ನಪೂರ್ಣಾ ಮೋಹನ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಜಿಪಂ ಮಾಜಿ ಸದಸ್ಯರಾದ ಭಾರತಿ ಪ್ರಭಾಕರ್, ಶ್ರುತಿ ವೆಂಕಟೇಶ್, ಬಂಡಿ ರಾಮಚಂದ್ರ, ಹಾರೋಗುಳಿಗೆ ಪದ್ಮನಾಭ, ತಾಪಂ ಮಾಜಿ ಅಧ್ಯಕ್ಷರಾದ ನವಮಣಿ, ಜೀನಾ ವಿಕ್ಟರ್ ಇದ್ದರು.