ಕಡೂರು: ರೈತರು ಶೂನ್ಯ ಬಂಡವಾಳದ ಸಾವಯವ ಕೃಷಿ ಅಳವಡಿಸಿಕೊಂಡರೆ ಸುಸ್ಥಿರ ಬದುಕು ಕಾಪಾಡಿಕೊಳ್ಳಲು ಸಾಧ್ಯ ಎಂದು ಸಾವಯವ ಕೃಷಿಕ ಪ್ರೊ. ಮಹಾಲಿಂಗಯ್ಯ ಹೇಳಿದರು.
ಯಗಟಿಪುರ ಗ್ರಾಮದಲ್ಲಿ ಚಿಕ್ಕಮಗಳೂರು ಸಾವಯವ ರೈತರ ಬಳಗದ ಸಾವಯವ ರೈತರಿಂದ ಶ್ರೀಗುರು ಶಾಂತಿ ಧಾಮ ಟ್ರಸ್ಟ್ ಕೃಷಿ ಆಶ್ರಮದಲ್ಲಿ ಸಾವಯವ ಕೃಷಿ ಕ್ಷೇತ್ರ ದರ್ಶನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಸಾವಯವ ಒಂದು ವಿಧಾನವಾಗಿದೆ. ಇದರಲ್ಲಿ ಕೃತಕ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲಾಗಿದೆ. ಆದರೆ ಅವುಗಳಿಗೆ ಪರ್ಯಾಯವಾಗಿ ಸಾವಯವ ಗೊಬ್ಬರಗಳು, ಬೆಳೆ ಉಳಿಕೆಗಳು, ಸಗಣಿ ಗೊಬ್ಬರ, ಎರೆಹುಳುಗಳಂತಹ ಜಂತುಗಳ ಗೊಬ್ಬರ, ಕಾಂಪೋಸ್ಟ್ ಮತ್ತು ಹಸಿರು ಗೊಬ್ಬರ ಮತ್ತು ಸಾವಯವ ಕೀಟ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತದೆ. ಇಂದಿನ ಹವಾಮಾನದ ಅನುಗುಣವಾಗಿ ವೈಜ್ಞಾನಿಕ ಸಮಗ್ರ ಬೆಳೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಇಚ್ಛಾಶಕ್ತಿ ಮುಖ್ಯ ಎಂದರು.
ಕೃಷಿ ತಜ್ಞರಾದ ಮೂಗ್ತಿಹಳ್ಳಿ ಚಂದ್ರಶೇಖರ್, ಹಿರಿಯೂರಿನ ಜೇನು ಕೃಷಿ ತಜ್ಞ ಶಾಂತವೀರಯ್ಯ, ಸಾವಯವ ಕೃಷಿಕ ನಾಗರಾಜ್ ಅವರು ಸಮಗ್ರ ಕೃಷಿ ಪದ್ಧತಿ ಕುರಿತು ರೈತರೊಂದಿಗೆ ಸಂವಾದ ನಡೆಸಿದರು.
ಗುರುಶಾಂತಿ ಧಾಮ ಟ್ರಸ್ಟ್‌ನ ನಿರ್ದೇಶಕ ತಾರಾನಾಥ್, ಚಂದ್ರಶೇಖರ್, ಮಂಜುನಾಥ್, ಕಡೂರು ತಾಲೂಕಿನ ಯುವ ಸಾವಯವ ರೈತರಾದ ಗಿರೀಶ್, ಶ್ರೀನಿವಾಸ್, ಸುನಿಲ್, ಮಹೇಶ್, ಶಿವಕುಮಾರ್, ಓಂಕಾರಮೂರ್ತಿ, ನವೀನ್, ಚಟ್ನಳ್ಳಿ ಮಹೇಶ್, ಹುಲ್ಲೇಹಳ್ಳಿ ಗೋವಿಂದಸ್ವಾಮಿ, ನಿರಂಜನ್ ಇದ್ದರು.