ನ್ಯೂಸ್

ಅಂಗಾಂಗ ಕಸಿ, ತಗ್ಗಲಿದೆ ಬಡವರ ಮೇಲಿನ ಹೊರೆ; ಸಚಿವರ ಭರವಸೆ

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ ಬಡವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸಾ ಸೌಲಭ್ಯವನ್ನು ಒದಗಿಸುತ್ತ ಬಂದಿದ್ದು, ಕೆಲ ಉಪಕರಣಗಳ ಕೊರತೆಯಿದೆ. ರೋಗಿಗಳು ಒಂದಿಷ್ಟು ಪರೀಕ್ಷೆಗಳನ್ನು ಹೊರಗಡೆ ಮಾಡಿಸಬೇಕಾಗಿದೆ. ಇದಕ್ಕೆ ಪರಿಹಾರ ನೀಡಲು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

‘ಆಪರೇಷನ್ ಹೆಸರಿಗಷ್ಟೇ ಉಚಿತ’ ಶೀರ್ಷಿಕೆಯಡಿ ಆ. 18ರಂದು ‘ವಿಜಯವಾಣಿ’ ಪ್ರಕಟಿಸಿದ್ದ ವರದಿ ಕುರಿತು ಸ್ಪಷ್ಟನೆ ನೀಡಿದ ಅವರು, ಈ ವಿಚಾರವಾಗಿ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲಿಸಿದೆ. ರೋಗಿಗಳು ಕೆಲವು ಪರೀಕ್ಷೆಗಳನ್ನು ಹೊರಗಡೆ ಮಾಡಿಸಬೇಕಿದ್ದು, ಅದಕ್ಕಾಗಿ 40-50 ಸಾವಿರ ರೂ. ವೆಚ್ಚವಾಗುತ್ತಿದೆ. ಈ ಹೊರೆ ತಪ್ಪಿಸಲು ಸಂಸ್ಥೆಯಲ್ಲೇ ಪರೀಕ್ಷಾ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ಈ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮೂತ್ರಪಿಂಡ ಕಸಿಯನ್ನು ಮಾಡಲಾಗುತ್ತದೆ. ಕಳೆದ ವರ್ಷ 43 ಮೂತ್ರಪಿಂಡ ಕಸಿಯನ್ನು ಈ ಸಂಸ್ಥೆ ಮಾಡಿದೆ. ಆದರೆ ಜನವರಿಯಿಂದ ಇಲ್ಲಿಯವರೆಗೆ 26 ಮೂತ್ರಪಿಂಡ ಕಸಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೂತ್ರಪಿಂಡ ಕಸಿ ಶಸಚಿಕಿತ್ಸೆಗೆ ಸುಮಾರು 2ರಿಂದ ಎರಡೂವರೆ ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಆದರೆ ನೆಫ್ರೋ ಯುರಾಲಜಿಯಲ್ಲಿ ಈ ಸೌಲಭ್ಯವನ್ನು ಉಚಿತವಾಗಿ ಒದಗಿಸುತ್ತಿದೆ ಎಂದು ತಿಳಿಸಿದರು.