ನ್ಯೂಸ್

ಮತದಾರರ ಪಟ್ಟಿಯ ದುರ್ಬಳಕೆಗೆ ಬಿಜೆಪಿ ಷಡ್ಯಂತ್ರ; ಕೇಂದ್ರದ ವಿರುದ್ಧ ಸಿಎಂ ಅತಿಶಿ ಗಂಭೀರ ಆರೋಪ | CM Atishi

ನವದೆಹಲಿ: ಮತದಾರರ ಪಟ್ಟಿಯಿಂದ ಆಮ್ ಆದ್ಮಿ ಪಕ್ಷದ ಬೆಂಬಲಿಗರ ಹೆಸರನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ(CM Atishi) ಮಂಗಳವಾರ(ನವೆಂಬರ್​ 26) ಆರೋಪಿಸಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯವಿದೆ. ಈ ಕಾರಣದಿಂದಾಗಿ ಸುಮಾರು 20,000 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು. ದೆಹಲಿ ಚುನಾವಣೆಯನ್ನು ಅನ್ಯಾಯದ ಮೂಲಕ ಗೆಲ್ಲಲು ಕೇಂದ್ರದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಲು ಅವರು ಯೋಜಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಎಎಪಿಗೆ ಸಂಬಂಧಿಸಿದವರ ಹೆಸರನ್ನು ತೆಗೆಯಲು ಒತ್ತಡ ಹಾಕಲಾಗುತ್ತಿದೆ ಎಂದು ತಿಳಿಸಿದರು.ಆದರೆ ಈ ವಿಚಾರವಾಗಿ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅಕ್ಟೋಬರ್ 28 ರಂದು 29 ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳನ್ನು (ಎಸ್‌ಡಿಎಂ) ವರ್ಗಾವಣೆ ಮಾಡುವ ಆದೇಶವನ್ನು ಈ ಆಪಾದಿತ ಪಿತೂರಿಯ ಮೊದಲ ಹೆಜ್ಜೆ ಎಂದು ಉಲ್ಲೇಖಿಸಿದ್ದಾರೆ. ಇಂತಹ ಕ್ರಮಗಳನ್ನು ವಿರೋಧಿಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ ಅವರು ಯಾವುದೇ ಅನಗತ್ಯ ಒತ್ತಡ ಅಥವಾ ಬಲವಂತವನ್ನು ದಾಖಲಿಸುವಂತೆ ಒತ್ತಾಯಿಸಿದರು.

ಮತದಾರರ ಹೆಸರು ಅಳಿಸುವಂತೆ ಯಾರಾದರೂ ಒತ್ತಾಯಿಸಿದರೆ ಅದನ್ನು ದಾಖಲಿಸಿ ನನಗೆ ಕಳುಹಿಸಿ ಎಂದು ಹೇಳಿದರು. ನಾನು ಕ್ರಮವನ್ನು ಖಚಿತಪಡಿಸುತ್ತೇನೆ. ಭಾರತದ ಸಂವಿಧಾನ ಇಂದು ನಿಮ್ಮ ಕೈಯಲ್ಲಿದೆ. ಮತ್ತೊಂದು ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಹಲವಾರು ಕೊಳೆಗೇರಿಗಳನ್ನು ಕೆಡವಿದರೂ, ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸ್ಲಂ ಪ್ರವಾಸೋದ್ಯಮಕ್ಕೆ ಆಶ್ರಯಿಸಿದ್ದಾರೆ ಎಂದು ಆರೋಪಿಸಿದರು. (ಏಜೆನ್ಸೀಸ್​)