ನ್ಯೂಸ್

ಕಾಶಿ ಜ್ಞಾನವಾಪಿ ಮಸೀದಿ ಸಂಕೀರ್ಣ ಸಮೀಕ್ಷೆಗೆ ಆದೇಶ

ಲಖನೌ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಪಕ್ಕದ ಜ್ಞಾನವಾಪಿ ಮಸೀದಿ ಜಾಗದ ವಿವಾದಕ್ಕೆ ಸಂಬಂಧಿಸಿ ವಾರಾಣಸಿ ಜಿಲ್ಲಾ ಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ವಿವಾದಿತ ಮಸೀದಿ ಸಂಕೀರ್ಣದ ಪುರಾತತ್ತ್ವ ಸಮೀಕ್ಷೆಗೆ ಅವಕಾಶ ನೀಡಿದೆ. ಅಯೋಧ್ಯೆ ಶ್ರೀರಾಮಜನ್ಮಭೂಮಿ ವಿವಾದ ಕೋರ್ಟ್​ನಲ್ಲಿ ಇತ್ಯರ್ಥವಾದ ಬಳಿಕ, ಮಥುರಾ ಮತ್ತು ಕಾಶಿ ಕ್ಷೇತ್ರಗಳ ವಿವಾದ ಕೋರ್ಟ್ ವಿಚಾರಣೆಯಲ್ಲಿದ್ದು, ಕಾಶಿಗೆ ಸಂಬಂಧಿಸಿ ಪ್ರಮುಖ ಆದೇಶ ಹೊರಬಿದ್ದಿದೆ.

ಸ್ಥಳೀಯ ವಕೀಲ ವಿಜಯ ಶಂಕರ್ ರಸ್ತೋಗಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ವಾರಾಣಸಿ ಸಿವಿಲ್ ಕೋರ್ಟ್​ನ ಸಿವಿಲ್ ನ್ಯಾಯಾಧೀಶ (ಹಿರಿಯರ ವಿಭಾಗ) ಆಶುತೋಶ್ ತಿವಾರಿ ಈ ಮಹತ್ವದ ಆದೇಶ ನೀಡಿದ್ದಾರೆ. ಇದಕ್ಕಾಗಿ ಭಾರತೀಯ ಪುರಾತತ್ತ್ವ ಇಲಾಖೆ ಪಂಚ ಸದಸ್ಯರ ಸಮಿತಿ ರಚಿಸಬೇಕು. ಆ ಸಮಿತಿ ನಿಗದಿತ ಮಾರ್ಗಸೂಚಿ ಪ್ರಕಾರ ಸಮೀಕ್ಷಾ ಕಾರ್ಯ ನಡೆಸಬೇಕು. ಸಮೀಕ್ಷೆ ಮುಗಿದ ಬಳಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ತಡಮಾಡದೇ ಕೋರ್ಟ್​ಗೆ ಸಲ್ಲಿಸಬೇಕು. ಕೇಸ್​ನ ಮುಂದಿನ ವಿಚಾರಣೆ ಮೇ 31ರಂದು ನಡೆಯಲಿದೆ ಎಂದು ಕೋರ್ಟ್ ಹೇಳಿದೆ. ರಸ್ತೋಗಿ ಸಲ್ಲಿಸಿದ್ದ ಅರ್ಜಿಗೆ ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು.

ನ್ಯಾಯಾಲಯದ ನಿರ್ದೇಶನದ ಮುಖ್ಯಾಂಶ

  • ವಿವಾದಿತ ಜ್ಞಾನವಾಪಿ ಪ್ರದೇಶದ ಸಮಗ್ರ ಭೌತಿಕ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಇಲಾಖೆ ಕೈಗೊಳ್ಳಬೇಕು.
  • ಪ್ರಸಿದ್ಧರು ಮತ್ತು ಪುರಾತತ್ತ್ವ ಪರಿಣತರನ್ನು ಒಳಗೊಂಡ ಐದು ಸದಸ್ಯರ ತಂಡವನ್ನು ರಚಿಸಬೇಕು. ಇದರಲ್ಲಿ ಇಬ್ಬರು ಅಲ್ಪಸಂಖ್ಯಾತ ಸಮುದಾಯವರು ಇರಬೇಕು.
  • ಈ ಸಮಿತಿಯ ಕೆಲಸಗಳ ನಿಗಾವಹಿಸುವುದಕ್ಕೆ ಪರಿಣತ ವೀಕ್ಷಕರೊಬ್ಬರನ್ನು ನೇಮಕ ಮಾಡಬೇಕು. ಸಮಿತಿಯು ವರದಿಯನ್ನು ಸಿದ್ಧಪಡಿಸಿ ವೀಕ್ಷಕರಿಗೆ ಒಪ್ಪಿಸಬೇಕು.
  • ಜ್ಞಾನವಾಪಿ ಪ್ರದೇಶದಲ್ಲಿ ಯಾವುದೇ ಧಾರ್ವಿುಕ ಶ್ರದ್ಧಾಕೇಂದ್ರದ ಕುರುಹು, ಅದರ ಮೇಲೆ ಇನ್ನಾವುದೋ ಕಟ್ಟಡ ನಿರ್ಮಾಣ ಅಥವಾ ಅದರ ನವೀಕರಣ ಅಥವಾ ಬೇರಾವುದೇ ರೀತಿಯ ಅತಿಕ್ರಮಣ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚುವುದೇ ಸಮಿತಿಯ ಮುಖ್ಯ ಉದ್ದೇಶ. ಒಂದೊಮ್ಮೆ ಅಂತಹ ಅತಿಕ್ರಮಣದ ಕುರುಹು ಕಂಡರೆ, ಸ್ಮಾರಕ, ಪುರಾತತ್ತ್ವ ವಿನ್ಯಾಸದ ಕಟ್ಟಡ ಎಷ್ಟು ಹಳೆಯದು, ಅದಕ್ಕೆ ಬಳಸಿದ ಸಾಮಗ್ರಿ ಯಾವುದು ಎಂಬುದನ್ನು ಪತ್ತೆ ಹಚ್ಚಬೇಕು.
  • ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ವಣಕ್ಕೆ ಮೊದಲು ಅಲ್ಲಿ ಹಿಂದು ಸಮುದಾಯಕ್ಕೆ ಸೇರಿದ ಯಾವುದಾದರೂ ದೇವಸ್ಥಾನ ಇದ್ದುದಕ್ಕೆ ಕುರುಹುಗಳಿವೆಯೇ ಅಥವಾ ದೇವಸ್ಥಾನದ ಮೇಲೆ ಮಸೀದಿಯನ್ನು ನಿರ್ವಿುಸಲಾಗಿದೆಯೇ ಅಥವಾ ದೇವಸ್ಥಾನವನ್ನೇ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆಯೇ ಎಂಬುದನ್ನು ಸಮಿತಿ ಪತ್ತೆ ಹಚ್ಚಬೇಕಾಗಿದೆ. ಹಾಗಾಗಿದ್ದಲ್ಲಿ, ದೇವಸ್ಥಾನದ ವಿನ್ಯಾಸ, ಯಾವ ದೇವಸ್ಥಾನ, ದೇವರು ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಬೇಕು.
  • ಸಮೀಕ್ಷೆ ಸಂದರ್ಭದಲ್ಲಿ ವಿವಾದಿತ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡುವುದಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಮಿತಿಯದ್ದಾಗಿರುತ್ತದೆ. ಒಂದೊಮ್ಮೆ ಇದು ಪ್ರಾಯೋಗಿಕವಲ್ಲದೇ ಹೋದರೆ, ಮಸೀದಿಯ ಆವರಣದೊಳಗೆ ಪರ್ಯಾಯ ಸ್ಥಳದಲ್ಲಿ ನಮಾಜ್​ಗೆ ಅವಕಾಶ ಮಾಡಿಕೊಡಬೇಕಾದ್ದು ಕೂಡ ಸಮಿತಿಯದ್ದೇ ಹೊಣೆಗಾರಿಕೆ.
  • ಇದು ಬಹಳ ಸೂಕ್ಷ್ಮ ವಿಚಾರವಾದ ಕಾರಣ ಸಮಿತಿಯು ಹಿಂದುಗಳು ಮತ್ತು ಮುಸಲ್ಮಾನರನ್ನು ಸಮಾನ ಗೌರವದಿಂದಲೇ ಕಾಣಬೇಕು.
  • ದೂರುದಾರರು ಅಥವಾ ಪ್ರತಿವಾದಿಗಳು ಸಮಿತಿಯ ಮೇಲೆ ಅಭಿಪ್ರಾಯ ಹೇರುವಂತೆ ಇಲ್ಲ.
  • ಸಮೀಕ್ಷಾ ಕಾರ್ಯವನ್ನು ಸಂಜೆ 5ರಿಂದ ರಾತ್ರಿ 9 ಗಂಟೆ ನಡುವೆ ನಡೆಯಬೇಕು.

ಇತ್ತೀಚಿನ ಬೆಳವಣಿಗೆ

1991: ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ (ದೇವರು) ಪರವಾಗಿ ವಾರಾಣಸಿ ಸಿವಿಲ್ ಕೋರ್ಟ್ ನಲ್ಲಿ ಮೊದಲ ಪಿಟಿಷನ್ ದಾಖಲು. ಜ್ಞಾನವಾಪಿ ಕಾಂಪ್ಲೆಕ್ಸ್ ನಲ್ಲಿ ವಿಶ್ವನಾಥನ ಆರಾಧನೆಗೆ ಅವಕಾಶ ನೀಡುವಂತೆ ಕೋರಿದ್ದರು. ಅಲ್ಲದೆ, ಸಂಕೀರ್ಣ ಕಾಶಿ ದೇವಸ್ಥಾನದ ಭಾಗವೆಂದು ಘೋಷಿಸಬೇಕು, ಕಾಂಪ್ಲೆಕ್ಸ್ ಪ್ರದೇಶ ದಿಂದ ಮುಸ್ಲಿಮರನ್ನು ಹೊರಹಾಕಬೇಕು, ದೇವಸ್ಥಾನ ಪುನರ್​ನಿರ್ವಣಕ್ಕೆ ಹಿಂದುಗಳಿಗೆ ಅನುಮತಿ ನೀಡಬೇಕೆಂದು ಕೋರ್ಟ್​ಗೆ ಮನವಿ ಮಾಡಿದ್ದರು.

1998: ಅರ್ಜಿ ವಿಚಾರಣೆಗೆ ತಡೆಕೋರಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಇದರಂತೆ ಜಿಲ್ಲಾ ಕೋರ್ಟ್ ವಿಚಾರಣೆಗೆ ಕಳೆದ 22 ವರ್ಷದಿಂದ ತಡೆಬಿದ್ದಿತ್ತು.

2019 ಡಿಸೆಂಬರ್: ವಿಜಯ ಶಂಕರ ರಸ್ತೋಗಿ ಅವರು ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ದೇವರ ಪರವಾಗಿ ವಾರಾಣಸಿ ಜಿಲ್ಲಾ ಕೋರ್ಟ್​ನಲ್ಲಿ ದಾವೆ ಹೂಡಿದರು. ಮಸೀದಿ ಸಂಕೀರ್ಣದ ಪುರಾತತ್ತ್ವ ಸಮೀಕ್ಷೆ ನಡೆಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು. ದೇವರ ‘ಸ್ನೇಹಿತ’ ಎಂಬ ನೆಲೆಯಲ್ಲಿ ರಸ್ತೋಗಿ ದಾವೆ ಹೂಡಿದ್ದರು.

2020 ಜನವರಿ: ರಸ್ತೋಗಿ ಅರ್ಜಿಗೆ ಅಂಜುಮಾನ್ ಇಂತೆ ಜಾಮಿಯಾ ಮಸೀದಿ ಸಮಿತಿ ವಿರೋಧ ವ್ಯಕ್ತಪಡಿಸಿ ಕೋರ್ಟ್​ಗೆ ಅರ್ಜಿ

ಫೆಬ್ರವರಿ: ಅಲಹಾಬಾದ್ ಹೈಕೋರ್ಟ್ ತಡೆ ವಿಸ್ತರಿಸದ ಕಾರಣ ವಿಚಾರಣೆ ಮುಂದುವರಿಸಲು ರಸ್ತೋಗಿ ಜಿಲ್ಲಾ ಕೋರ್ಟ್​ಗೆ ಮನವಿ ಮಾಡಿದ್ದರು.

ವಾದ v/s ಪ್ರತಿವಾದ

  • ಕಾಶಿ ವಿಶ್ವನಾಥ ದೇಗುಲದ ಒಂದು ಭಾಗವನ್ನು ಕೆಡವಿ ಅಲ್ಲಿ ಮಸೀದಿ ನಿರ್ವಿುಸಿ ಜ್ಞಾನವಾಪಿ ಮಸೀದಿ ಎಂದು ಹೆಸರಿಸಲಾಗಿದೆ. ಇದು 1669ರಲ್ಲಿ ನಡೆದ ದಾಳಿಯಾಗಿತ್ತು. ಮಸೀದಿ ಜಾಗ ಕಾಶಿ ವಿಶ್ವನಾಥ ದೇಗುಲಕ್ಕೆ ಸೇರಿದ್ದು ಎಂದು ಘೋಷಿಸಿ, ಮುಸ್ಲಿಮರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂಬುದು ದೂರುದಾರರ ಆಗ್ರಹ.
  • ಮಸೀದಿ ಮೊದಲಿನಿಂದಲೂ ಇದೆ. ಅಲ್ಲಿ ಯಾವುದೇ ದೇವಸ್ಥಾನ ಇಲ್ಲ. ಪುರಾತತ್ತ್ವ ಇಲಾಖೆ ಸಮೀಕ್ಷೆ ಮಾಡಬೇಕಾಗಿಲ್ಲ. ಅದು ಕಾಶಿ ವಿಶ್ವನಾಥನ ದೇಗುಲದ ಭಾಗವೂ ಅಲ್ಲ ಎಂಬುದು ಮಸೀದಿ ಸಮಿತಿಯ ಪ್ರತಿವಾದ.

ಜ್ಞಾನವಾಪಿ ಪ್ರದೇಶ ವಿವಾದದ ಹಿನ್ನೆಲೆ

  • ರಾಜಾ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಿದ ದೇವಸ್ಥಾನ ಇದಾಗಿದ್ದು, ವಿಶ್ವನಾಥ ದೇವರ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. 1669ರಲ್ಲಿ ತಪು್ಪ ಮಾಹಿತಿ ಆಧರಿಸಿ ಮೊಘಲ ದೊರೆ ಔರಂಗಜೇಬ, ಶಾಲೆಗಳು ಮತ್ತು ದೇವಸ್ಥಾನಗಳನ್ನು ನಾಶಮಾಡುವಂತೆ ಆದೇಶ ನೀಡಿದ್ದ. ಪರಿಣಾಮವಾಗಿ ವಿಶ್ವನಾಥ/ವಿಶ್ವೇಶ್ವರ ದೇವಸ್ಥಾನವನ್ನೂ ಕೆಡವಲಾಗಿತ್ತು.
  • ಜ್ಞಾನವಾಪಿ ಕಾಂಪೌಂಡ್​ನಲ್ಲಿ 1809ರಲ್ಲಿ ದಂಗೆ ಏರ್ಪಟ್ಟಿತ್ತು. ಅಂದು ಇಲ್ಲಿದ್ದ ಹಿಂದುಗಳನ್ನು ಮುಸ್ಲಿಮರು ಹೊರಗಟ್ಟಿದ್ದರು. ವಾಸ್ತವದಲ್ಲಿ ಹಿಂದುಗಳ ಅಧೀನದಲ್ಲೇ ಈ ಪ್ರದೇಶವಿತ್ತು.
  • ಬ್ರಿಟಿಷ್ ಆಳ್ವಿಕೆಯಲ್ಲಿ ದಂಗೆಗೆ ಸಂಬಂಧಿಸಿದ ಪರಿಹಾರ ಸಿಕ್ಕಿದ್ದು ಮಸೀದಿಗೆ.
  • 1928ರಲ್ಲಿ ಈ ವಿವಾದಿತ ಜಾಗ ಮತ್ತೆ ಹಿಂದುಗಳಿಗೆ ಸಿಕ್ಕಿತ್ತು. ಅಲ್ಲಿಂದೀಚೆಗೆ ಈ ಪ್ರದೇಶದಲ್ಲಿ ಕೋಮುಗಲಭೆ ನಿರಂತರವಾಯಿತು. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಧೀಶರು ನೀಡಿದ ಆದೇಶಗಳು ವ್ಯತಿರಿಕ್ತವಾದರೂ ದೂರುದಾರರ ನಾಗರಿಕ ಹಕ್ಕು ಚಲಾಯಿಸುವುದಕ್ಕೆ ಅಡ್ಡಿಯಾಗಲಿಲ್ಲ.
  • ಜಿಲ್ಲಾ ಮ್ಯಾಜಿಸ್ಟ್ರೇಟ್ ಕಾಲಕಾಲಕ್ಕೆ ನೀಡಿದ ಆಡಳಿತಾತ್ಮಕ ಆದೇಶದ ಪರಿಣಾಮ ಮುಸ್ಲಿಮರು ವಿವಾದಿತ ಸ್ಥಳದಲ್ಲಿ ನಮಾಜ್ ಮಾಡುವುದನ್ನು ಮುಂದುವರಿಸುವುದು ಸಾಧ್ಯವಾಯಿತು. ಇದಕ್ಕೆ ಹಿಂದು ಸಮುದಾಯದವರು ಕಾಲಕಾಲಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
  • ಒಂದು ಹಂತದಲ್ಲಿ ವಿವಾದಿತ ಸ್ಥಳದಲ್ಲಿ ನಮಾಜು ಮಾಡದಂತೆ ಮುಸ್ಲಿಮರನ್ನು ಜಿಲ್ಲಾಡಳಿತ ತಡೆಯಿತು. ಪರಿಣಾಮ 1936ರಲ್ಲಿ ಸಬ್ ಜಡ್ಜ್ ಕೋರ್ಟ್​ನಲ್ಲಿ ಮುಸ್ಲಿಮರ ಪರ ಕೇಸ್ (ದಿನ್ ಮೊಹಮ್ಮದ್ ಮತ್ತು ಇತರರು v/s ಸ್ಟೇಟ್ ಇನ್ ಕೌನ್ಸಿಲ್ ಮತ್ತು ಇತರರು) ದಾಖಲಾಗಿತ್ತು. ಸರ್ಕಾರ ಇದನ್ನು ಪ್ರಶ್ನಿಸಿತ್ತು. 1937ರಲ್ಲಿ ಕೇಸ್ ವಜಾಗೊಂಡಿತು. ಹೈಕೋರ್ಟ್​ನಲ್ಲೂ ಸಬ್-ಜಡ್ಜ್ ಆದೇಶ ಎತ್ತಿಹಿಡಿಯಲ್ಪಟ್ಟಿತು.