ನ್ಯೂಸ್

ರಾಷ್ಟ್ರೀಯ, ನಾಡಹಬ್ಬಗಳಂದೂ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸಲು ಆದೇಶ

ಬೆಂಗಳೂರು: ಮಧ್ಯಾಹ್ನದ ಉಪಾಹಾರ (ಪಿಎಂ ಪೋಷಣ್) ಯೋಜನೆಗೆ ಒಳಪಟ್ಟಿರುವ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಮತ್ತು ನಾಡಹಬ್ಬಗಳಂದು ಬಿಸಿಯೂಟ ವಿತರಿಸುವಂತೆ ಪಿಎಂ ಪೋಷಣ್ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳು ಮತ್ತು ನಾಡಹಬ್ಬಗಳ ಆಚರಣೆ ಮಾಡಿದ ಬಳಿಕ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿ ನಂತರ ಮನೆಗೆ ಕಳುಹಿಸಲು ಆದೇಶ ಹೊರಡಿಸಿದೆ.

ಪ್ರತಿ ವರ್ಷದಂತೆ ಮಧ್ಯಾಹ್ನ ಉಪಾಹಾರ (ಪಿಎಂ ಪೋಷಣ್) ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಲೆಕ್ಕಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ನಾಡಹಬ್ಬಗಳನ್ನು (ಕನ್ನಡ ರಾಜ್ಯೋತ್ಸವ) ಶಾಲಾ ಕೆಲಸದ ದಿನಗಳೆಂದು ಪರಿಗಣಿಸಲಾಗಿರುತ್ತದೆ.

ಪಿಎಂ ಪೋಷಣ್ ಯೋಝನೆ ಅಡಿಯಲ್ಲಿ ಬಿಸಿಯೂಟ ಯೋಜನೆಯನ್ನು ಅನುಷ್ಠಾನ ಮಾಡಲು (ಯೋಜನಾ ಅನುಮೋದನಾ ಮಂಡಳಿ) ಪಿಎಬಿಯಿಂದ ಅನುಮೋದನೆ ಪಡೆಯಲಾಗಿರುತ್ತದೆ. ಆದ್ದರಿಂದ ಎಲ್ಲ ರಾಷ್ಟ್ರೀಯ ಹಾಗೂ ನಾಡಹಬ್ಬಗಳಂದು ಮಧ್ಯಾಹ್ನ ಉಪಾಹಾರ ಯೋಜನೆಗೆ ಒಳಪಟ್ಟಿರುವ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಬಿಸಿಯೂಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪಿಎಂ ಪೋಷಣ್ ನಿರ್ದೇಶಕರು ಸೂಚಿಸಿದ್ದಾರೆ.