ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ಹೊಳಭೈರನಹಳ್ಳಿ ಗ್ರಾಮಗಳನ್ನು ಹೊಳೆಹೊನ್ನೂರು ಪಪಂ ಸೇರ್ಪಡೆ ಮಾಡದಂತೆ ಒತ್ತಾಯಿಸಿ ಶಾರದಾ ಪೂರ‌್ಯಾನಾಯ್ಕಾ ನೇತೃತ್ವದಲ್ಲಿ ಬಸವರಾಜ್, ಯಶವಂತರಾವ್ ಘೋರ್ಪಡೆ ಮತ್ತಿತರರು ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. 
ನ್ಯೂಸ್

ಪಪಂ ಗ್ರಾಮಗಳ ಸೇರ್ಪಡೆಗೆ ವಿರೋಧ

ಶಿವಮೊಗ್ಗ: ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಎಮ್ಮೆಹಟ್ಟಿ ಗ್ರಾಪಂನ ಮೂರು ಗ್ರಾಮಗಳನ್ನು ಕೈಬಿಟ್ಟು ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿಯೇ ಗ್ರಾಪಂ ಅನ್ನು ಮುಂದುವರಿಸಬೇಕೆಂದು ಆಗ್ರಹಿಸಿ ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ಹೊಳಭೈರನಹಳ್ಳಿ ಗ್ರಾಮಸ್ಥರು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಮೂರು ಗ್ರಾಮಗಳನ್ನು ಹೊಳೆಹೊನ್ನೂರು ಪಪಂಗೆ ಸೇರಿಸಲಾಗಿದೆ. ಈ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಮತ್ತು ಬಹುತೇಕ ಕೃಷಿಕರು ವಾಸವಾಗಿದ್ದಾರೆ. ಪಪಂ ಕೇಂದ್ರ ಸ್ಥಾನ ಇಲ್ಲಿಂದ ಆರು ಕಿ.ಮೀ ದೂರದಲ್ಲಿದೆ. ಕೃಷಿಯೇತರ ಚಟುವಟಿಕೆ ಕಡಿಮೆಯಿದೆ. ಆದರೆ ಸುಳ್ಳು ಮಾಹಿತಿ ನೀಡಿ ಈ ಗ್ರಾಮಗಳನ್ನು ಪಪಂ ವ್ಯಾಪ್ತಿಗೆ ತರಲಾಗಿದೆ. ಪಪಂಗೆ ಸೇರ್ಪಡೆಯಾದರೆ ರೈತರು ವಿವಿಧ ಯೋಜನೆಗಳಿಂದ ವಂಚಿತರಾಗುತ್ತಾರೆ. ಕೂಲಿ ಕಾರ್ಮಿಕರು ಕೃಷಿ ಚಟುವಟಿಕೆ ಮೇಲೆ ಅವಲಂಬಿತ ಆಗಿರುವುದರಿಂದ ಅವರ ಆರ್ಥಿಕ ಸ್ಥಿತಿಯೂ ಕುಂಠಿತಗೊಳ್ಳುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ಈಗಿರುವ ಆದೇಶವನ್ನು ಮಾರ್ಪಾಡು ಮಾಡಿ, ಮೂರೂ ಗ್ರಾಪಂ ವ್ಯಾಪ್ತಿಯಲ್ಲೇ ಮುಂದುವರಿಸಬೇಕು. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ಯಶವಂತ ರಾವ್ ಘೋರ್ಪಡೆ, ಬಸವರಾಜ್, ಮೂರೂ ಗ್ರಾಮಗಳ ಮುಖಂಡರು ಇದ್ದರು.