ಸೋಗಾನೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳದಂತೆ ಒತ್ತಾಯಿಸಿ ಆರ್.ವಿಜಯಕುಮಾರ್, ಅನಿಲ್ ಸಾಗರ, ಶಿವಣ್ಣ, ಮಹಾದೇವಮ್ಮ, ನಾಗರಾಜ ಮುಂತಾದವರು ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.  
ನ್ಯೂಸ್

ಸೋಗಾನೆಯಲ್ಲಿ ಭೂಸ್ವಾಧೀನಕ್ಕೆ ವಿರೋಧ

ಶಿವಮೊಗ್ಗ: ಸೂಡಾದಿಂದ ತಾಲೂಕಿನ ಸೋಗಾನೆ ಸಮೀಪ 156ನೇ ಸರ್ವೇ ನಂಬರ್‌ನಲ್ಲಿ ಸಾಗುವಳಿ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ನಿರ್ಧರಿಸಿದ್ದು ಈ ತೀರ್ಮಾನ ಕೈ ಬಿಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ನಿಧಿಗೆ ಹೋಬಳಿ ಸೋಗಾನೆ ಸಮೀಪದ 156 ನೇ ಸರ್ವೇ ನಂಬರ್‌ನಲ್ಲಿರುವ ಜಮೀನಿನಲ್ಲಿ ನೂರಾರು ರೈತರು ಅಡಕೆ, ತೆಂಗು, ರಾಗಿ, ಭತ್ತ ಬೆಳೆಯುತ್ತಿದ್ದಾರೆ. ಕೃಷಿಯನ್ನೇ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣ, ಕೇಂದ್ರ ಕಾರಾಗೃಹ, ಕೆಇಬಿ, ಮದ್ಯಪಾನೀಯ ಘಟಕ, ಆಹಾರ ನಿಗಮ, ಕೆಎಚ್‌ಬಿ ಹೀಗೆ ಹಲವು ಉದ್ದೇಶಗಳಿಗಾಗಿ ಜಮೀನು ನೀಡಿದ್ದಾರೆ. ಈಗ ಮತ್ತೆ ಈ ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಈ ಹಿಂದೆ ಸೂಡಾ ಕಚೇರಿಯಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಈಗ ಜಮೀನು ವಶಪಡಿಸಿಕೊಳ್ಳುವ ಬಗ್ಗೆ ಸಿದ್ಧತೆ ನಡೆಸಿರುವುದು ತಿಳಿದು ಬಂದಿದೆ. ಇದರಿಂದ ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಸೋಗಾನೆ ಗ್ರಾಪಂ ಸದಸ್ಯ ಅನಿಲ್ ಸಾಗರ್, ಪ್ರಮುಖರಾದ ಅರುಣ್ ನಾಯ್ಡು, ರೈತರಾದ ಚೆಲುವ, ನಾಗರಾಜ್, ಚಂದ್ರಣ್ಣ, ಕೃಷ್ಣ, ಕುಮಾರ್, ಗಿರೀಶ್, ಮಹಾದೇವಮ್ಮ, ಮುತ್ತಣ್ಣ, ಶಿವಮೂರ್ತಿ, ಶಿವಣ್ಣ, ಹೊನ್ನಪ್ಪ, ಪರಮೇಶ್ವರ, ನಟರಾಜ, ರವಿ, ಲೋಕೇಶ್, ಚಿನ್ನಪ್ಪ ಮುಂತಾದವರಿದ್ದರು.