ನ್ಯೂಸ್

ಅಕ್ರಮ ಮಂಜೂರಾತಿಗೆ ವಿರೋಧ: ಛಲವಾದಿ ನಾರಾಯಣಸ್ವಾಮಿ ಸಮರ್ಥನೆ

ಬೆಂಗಳೂರು: ಕೆಐಎಡಿಬಿಯು ಡಿೆನ್ಸ್ ಏರೋಸ್ಪೇಸ್ ಕೈಗಾರಿಕಾ ಬಡಾವಣೆಯಲ್ಲಿ ನಾಗರಿಕ ಸವಲತ್ತಿಗೆ ಮೀಸಲಿಟ್ಟ ನಿವೇಶನ ಅಕ್ರಮ ಮಂಜೂರು, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದಕ್ಕೆ ವಿರೋಧ ಸೀಮಿತವಾಗಿತ್ತು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಟ್ರಸ್ಟ್‌ಗೆ ಕೊಟ್ಟ ನಿವೇಶನ ಹಿಂತಿರುಗಿಸಿ ಕೆಐಎಡಿಬಿಗೆ ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ. ತಪ್ಪು ಮಾಡಿ ಮೈಪರಚಿಕೊಳ್ಳುವುದು ಸಚಿವ ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ ಎಂದು ಎಂದು ತಿವಿದರು.

ರಾಹುಲ್ ಖರ್ಗೆ ಸ್ವಭಾವವನ್ನು ನೋಡಿ ಪ್ರಿಯಾಂಕ್ ಖರ್ಗೆ ಒಂದಿಷ್ಟು ಕಲಿಯಲಿ. ಮುಖ್ಯಮಂತ್ರಿ ರೀತಿ ಅಹಂಭಾವದಿಂದ ಮಾತನಾಡುವುದನ್ನು ಬಿಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ರಾಜ್ಯದ ಜನರ ಕ್ಷಮೆಯಾಚಿಸಲಿ

ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ಪ್ರಚೋದನೆ ಅಥವಾ ಮೆಚ್ಚಿಸುವುದಕ್ಕಾಗಿ ಖರ್ಗೆ ಟ್ರಸ್ಟ್‌ಗೆ ನಿವೇಶನ ನೀಡಿದ್ದನ್ನು ವಿರೋಧಿಸಿದ್ದಿಲ್ಲ. ನನ್ನ ಬಡತನದ ಬಗ್ಗೆ ಹೀಯಾಳಿಸಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಡಿೆನ್ಸ್ ಏರೋಸ್ಪೇಸ್ ಬಡಾವಣೆಯಲ್ಲಿ ನಾಗರಿಕ ಸವಲತ್ತು ಕಲ್ಪಿಸಲು ಕಾದಿಟ್ಟ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ ಅಧಿಸೂಚನೆಯನ್ನು ರದ್ದುಪಡಿಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಛಲವಾದಿ ಒತ್ತಾಯಿಸಿದರು.