ಕೊಪ್ಪಳ: ನಗರದ ರಾಘವೇಂದ್ರ ಸ್ವಾಮಿ ಮಠವನ್ನು ಮಂತ್ರಾಲಯದ ರಾಯರ ಮಠವು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂಬ ವಿಚಾರ ಭುಗಿಲೆದ್ದಿದ್ದು, ಭಕ್ತರು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ನಗರದ ರಾಯರ ಮಠಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶದಲ್ಲಿ ಕೊಪ್ಪಳ ಮಠದ ಬಗ್ಗೆ ಪ್ರಸ್ತಾಪಿಸಿ, ಈ ಮಠವು ರಾಯರ ಮೂಲ ಮೃತ್ತಿಕೆ ಹೊಂದಿದೆ. ಪೂರ್ವ ಯತಿಗಳಾದ ಸುಜಯೀಂದ್ರ ತೀರ್ಥರ ಕಾಲದಲ್ಲೇ ಈ ಮಠದ ಹೊಣೆ ಹೊತ್ತಿದ್ದ ಹುಲಿಗಿ ಆಚಾರ್ ಕುಟುಂಬದವರು 1971ರಲ್ಲೇ ಮಂತ್ರಾಲಯ ಮಠಕ್ಕೆ ದಾನ ಮಾಡಿದ್ದಾರೆ. ಇದರ ದಾಖಲೆ ತಮ್ಮ ಬಳಿ ಇವೆ. ಸುಗಮ ಆಡಳಿತ ನಡೆಸಲು ಮೇಲ್ವಿಚಾರಣಾ ಸಮಿತಿ ರಚಿಸಬೇಕಿದೆ. ಅಭಿವೃದ್ಧಿ ಕಾರ್ಯಗಳಾಗಬೇಕಿದೆ. ಮಂತ್ರಾಲಯದಿಂದ ಯಾರೇ ಮೂಲ ಮೃತ್ತಿಕೆ ತಂದು ರಾಯರ ಬೃಂದಾವನ ಸ್ಥಾಪಿಸುವರೋ ಅಂಥ ಬೃಂದಾವನ ಇರುವ ಪ್ರದೇಶ ರಾಯರಿಗೆ ಸೇರಿದ್ದು ಎಂದು ಹೇಳಿದರು.
ಕಾರ್ಯಕ್ರಮದ ನಂತರ ಶ್ರೀಗಳು ಭಕ್ತರೊಬ್ಬರ ಮನೆಗೆ ವಿಶ್ರಾಂತಿಗೆಂದು ತೆರಳಿದರು. ಶ್ರೀಗಳ ಹೇಳಿಕೆ ಹಿನ್ನೆಲೆಯಲ್ಲಿ ಗುಂಪುಗೂಡಿದ ಭಕ್ತರು, ಕೊಪ್ಪಳ ಮಠ ಐದು ದಶಕಗಳಿಂದ ಸ್ವತಂತ್ರವಾಗಿದೆ. ಸದ್ಯ ಇರುವ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ಮಾಡುತ್ತಿದೆ. ಯಾವುದೋ ಒಂದು ಮಠಕ್ಕೆ ಸೇರಿಸುವುದು ಸರಿಯಲ್ಲ. ಅದರ ಪ್ರಶ್ನೆ ಈಗ ಉದ್ಭವಿಸಲ್ಲ ಎಂಬ ನಿರ್ಧಾರಕ್ಕೆ ಬಂದರು. ನಂತರ ಪ್ರತಿಭಟನೆ ಮೆರವಣಿಗೆಯಲ್ಲಿ ಘೊಷಣೆ ಕೂಗುತ್ತಾ ಶ್ರೀಗಳ ಬಳಿಗೆ ತೆರಳಿ, ವಿಷಯ ತಿಳಿಸಿದರು.
ಇದಕ್ಕೆ ಸುಬುಧೇಂಧ್ರ ತೀರ್ಥರು ಪ್ರತಿಕ್ರಿಯಿಸಿ, ಕೊಪ್ಪಳ ಮಠಕ್ಕೆ ಸಂಬಂಧಿಸಿ ನಮ್ಮ ಬಳಿ ದಾಖಲೆಗಳಿವೆ. ಈಗ ಮಠವನ್ನು ನೋಡಿಕೊಳ್ಳುತ್ತಿರುವ ಜಗನ್ನಾಥ ಹುನಗುಂದ ಅವರೇ ವ್ಯವಸ್ಥಾಪಕರಾಗಿ ಮುಂದುವರಿಯಲಿ. ಭಕ್ತರನ್ನು ಕಡೆಗಣಿಸುವ ಉದ್ದೇಶ ತಮ್ಮದಲ್ಲ. ಮಂತ್ರಾಲಯ ಮಠದ ಪೀಠಾಧೀಶನಾಗಿ ಮಠದ ಆಸ್ತಿ ಉಳಿಸಿಕೊಂಡು ಹೋಗುವ ಜಬಾಬ್ದಾರಿ ನನ್ನದು. ಸದ್ಯ ಯಥಾ ಸ್ಥಿತಿ ಇರಲಿ. ಮುಂದೆ ನೋಡೋಣ ಎಂದು ಭಕ್ತರನ್ನು ಸಮಾಧಾನ ಪಡಿಸಿದರು.
ಎಲ್ಲ ಬೆಳವಣಿಗೆಗಳಿಂದ ಬೇಸರಗೊಂಡ ಸುಬುಧೇಂದ್ರ ತೀರ್ಥರು, ಗುರುವಾರ ನಿಗದಿಯಾಗಿದ್ದ ಧಾರ್ವಿುಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆನೆಗೊಂದಿಯತ್ತ ತೆರಳಿದರು. ಕೊಪ್ಪಳ ರಾಯರ ಮಠದವರು ಪ್ರತಿಕ್ರಿಯಿಸಿ, ಇದು ನಮ್ಮ ಆಂತರಿಕ ವಿಚಾರ. ನಾವೇ ಪರಿಹರಿಸಿಕೊಳ್ಳುತ್ತೇವೆ. ಮಂತ್ರಾಲಯ ಶ್ರೀಗಳು ಕೊಪ್ಪಳ ರಾಯರಿಗೆ ಪೂಜೆ ಸಲ್ಲಿಸಬೇಕೆಂಬುದು ನಮ್ಮೆಲ್ಲರ ಆಶಯವೆಂದು ಹೇಳಿದರು.