ಶಿರಾಳಕೊಪ್ಪ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಮಮತಾ ನಿಂಗಪ್ಪ, ಮುದಸೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್, ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಇತರರಿದ್ದರು.  
ನ್ಯೂಸ್

ವಾಹನ ಚಾಲಕರ ಬಳಿ ಹಣ ವಸೂಲಿಗೆ ವಿರೋಧ

ಶಿರಾಳಕೊಪ್ಪ: ಪುರಸಭೆ ಪರವಾನಗಿ ಇಲ್ಲದೆ ಬಸ್ ನಿಲ್ದಾಣಕ್ಕೆ ಆಗಮಿಸುವ ಕಾರು ಮತ್ತು ಇತರ ನಾಲ್ಕು ಚಕ್ರದ ವಾಹನಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಕ್ರಮವನ್ನು ಪುರಸಭೆ ಸದಸ್ಯ ಟಿ.ರಾಜು ಖಂಡಿಸಿದರು.

ಪುರಸಭೆಯಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ವಾಹನಗಳಿಂದ ಅನಧಿಕೃತವಾಗಿ ಹಣ ಸಂಗ್ರಹಿಸುವ ಕ್ರಮವನ್ನು ಪ್ರಶ್ನಿಸಿದಾಗ ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು. ತಕ್ಷಣ ಸಂಬಂಧಿಸಿದ ವ್ಯಕ್ತಿಗೆ ನೋಟೀಸ್ ನೀಡಿ, ಅವರಿಂದ ವಸೂಲಿ ಮಾಡಲಾದ ಹಣವನ್ನು ಪುರಸಭೆಗೆ ಕಟ್ಟಿಸಬೇಕು ಎಂದು ಒತ್ತಾಯಿಸಲಾಯಿತು. ಪರವಾನಗಿ ಇಲ್ಲದೆ ಇಷ್ಟು ಸಮಯದಿಂದ ಹಣ ವಸೂಲಿ ಮಾಡಿಸುತ್ತಿರುವ ವ್ಯಕ್ತಿ ಯಾರೆಂದು ಪತ್ತೆ ಹಚ್ಚಬೇಕು ಎಂದು ಸದಸ್ಯರು ಆಗ್ರಹಿಸಿದರು.

ಮುಖ್ಯಾಧಿಕಾರಿ ಹೇಮಂತ ಡೊಳ್ಳೆ ಪ್ರತಿಕ್ರಿಯಿಸಿ, ಹಳೇ ಬಸ್ ನಿಲ್ದಾಣದಲ್ಲಿ ಕಟ್ಟಿಸಿರುವ ಕಾಂಪ್ಲೆಕ್ಸ್‌ನಲ್ಲಿ ಬಾಡಿಗೆ ಬಾಕಿ ಉಳಿಸಿಕೊಂಡ ವ್ಯಕ್ತಿಗಳಿಂದ ಬಾಡಿಗೆ ವಸೂಲಿ ಮಾಡಲು ತಾಕೀತು ಮಾಡಿ ಬೀಗಹಾಕಿ, ಮೂರು ತಿಂಗಳು ಕಾಲಾವಕಾಶ ನೀಡಿ ವಸೂಲಿ ಮಾಡಲಾಗುವುದು ಎಂದರು.

ಪುರಸಭೆ ವ್ಯಾಪ್ತಿಯ ಖಾತೆ ನಂ. 919/913/732/2 ರಲ್ಲಿ ಒಟ್ಟು 10 ಎಕರೆ ಜಾಗದಲ್ಲಿ ಪಟ್ಟಣದ ವಿರಕ್ತಮಠದ ಸ್ವಾಮೀಜಿ ಈ ಹಿಂದೆ ಸೈಟುಗಳನ್ನು ನೀಡಿದ್ದಾರೆ. ಅವುಗಳನ್ನು ಖಾತೆ ದಾಖಲಿಸುವಂತೆ ಸದಸ್ಯ ರಾಘವೇಂದ್ರ ಹಾಗೂ ಇತರರು ಸಭೆಯಲ್ಲಿ ಪ್ರಸ್ತಾಪಿಸಿದರು. ಸದಸ್ಯರಾದ ಟಿ.ರಾಜು, ಜಾಫರ್, ಮಕಬುಲ್ ಸಾಬ್, ತಡಗಣಿ ರಾಜಣ್ಣ ಮಾತನಾಡಿ, ಖಾತೆ ಮಾಡುವುದಿದ್ದರೆ ಪಟ್ಟಣದಲ್ಲಿ ಅಂತಹ ಸಾಕಷ್ಟು ಆಸ್ತಿ ಇವೆ. ಪಟ್ಟಣದ ಪಂಪ್‌ಹೌಸ್ ಕಾಲನಿಯಲ್ಲಿ ರಾಜಕಾಲುವೆಯನ್ನು 5 ಸಾವಿರ ಅಡಿಗಳಷ್ಟು ಒತ್ತುವರಿ ಆಗಿದೆ. ಈ ಕುರಿತು ತನಿಖೆ ಆಗಬೇಕು ಎಂದು ಸದಸ್ಯ ಜಾಫರ್ ತಿಳಿಸಿದರು.

ಮೂಲ ದಾಖಲೆ ಇದ್ದವರಿಗೆ ಖಾತೆ: ಮಠದ ಗದ್ದೆ ಹಾಗೂ ಇತರ ಆಶ್ರಯ ಬಡಾವಣೆಯಲ್ಲಿ ಖಾತೆ ಮಾಡಬೇಕು ಎಂಬ ವಿಷಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ಹಕ್ಕುಪತ್ರ ಪಡೆದವರದು ಮಾತ್ರ ಖಾತೆ ಮಾಡಬೇಕು. ಕೆಲವರು ಫಲಾನುಭವಿಗಳಿಂದ ಹಿಂದೆ ಸೈಟ್ ಖರೀದಿಸಿ, ವ್ಯವಹಾರ ಮಾಡುತ್ತಿದ್ದಾರೆ. ಮೂಲ ದಾಖಲೆ ಇದ್ದರೆ ಮಾತ್ರ ಖಾತೆ ಮಾಡಬೇಕು ಎಂದು ಟಿ.ರಾಜು ಮತ್ತು ಜಾಫರ್ ಕೋರಿದರು. ಸೊರಬ ರಸ್ತೆಯಲ್ಲಿ ಇದ್ದ ಕ್ರೀಡಾಂಗಣವನ್ನು ನವೀಕರಿಸಿ ಹೊಸ ಹೆಸರನ್ನು ನಾಮಕರಣಗೊಳಿಸಬೇಕು ಎಂಬ ವಿಷಯ ಪ್ರಸ್ತಾಪಗೊಂಡಿದ್ದು, ಸದಸ್ಯರು ಇಂದಿರಾ ಗಾಂಧಿ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿತ್ತು. ಮತ್ತೆ ಅದೇ ಹೆಸರಿಡುವಂತೆ ಕೋರಿದರು.

ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಲೇಶ್, ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಇತರರಿದ್ದರು.