ಬೆಂಗಳೂರು: ಕೇಂದ್ರ ಸರ್ಕಾರ ಬ್ರಿಟಿಷರ ಕಾಲದ ಕಾನೂನುಗಳನ್ನು ಬದಲಿಸಿ, ಜಾರಿಗೊಳಿಸಿದ ಹೊಸ ಮೂರು ಅಪರಾಧ ಕಾಯ್ದೆಗಳು ಸರಳೀಕರಣ, ಪಾರದರ್ಶಕತೆ, ಡಿಜಿಟಿಲೀಕರಣವೆಂಬ ಮೂರು ಸೂತ್ರಗಳನ್ನು ಒಳಗೊಂಡಿದೆ. ಪ್ರತಿಪಕ್ಷಗಳು ವಿರೋಧಿಸುವುದು ಸರಿಯಲ್ಲವೆಂದು ಮಾಜಿ ಸಚಿವ, ಶಾಸಕ ಎಸ್.ಸುರೇಶ್‌ಕುಮಾರ್ ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ಕಾನೂನು ಪ್ರಕೋಷ್ಠ ಬುಧವಾರ ಏರ್ಪಡಿಸಿದ್ದ ‘ಭಾರತೀಯ ಸಾಕ್ಷ್ಯ ಅಧಿನಿಯಮ’ದ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಪರಾಧಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಪ್ರತಿಪಕ್ಷಗಳು ಪೂರ್ಣ ವಿರೋಧಿಸುವ ಬದಲಿಗೆ ಸರಿಯಿರುವುದನ್ನು ಒಪ್ಪಿಕೊಳ್ಳಬೇಕು. ಲೋಪಗಳತ್ತ ಗಮನಸೆಳೆದರೆ ಪರಿಷ್ಕರಿಸುವ ಮುಕ್ತ ಮನಸ್ಸು ಕೇಂದ್ರ ಸರ್ಕಾರದ್ದಾಗಿದೆ ಎಂದು ಸಮಜಾಯಿಷಿ ನೀಡಿದರು.
ಬ್ರಿಟಿಷರ ಕಾನೂನಿಗೆ ಕೊಕ್
ಬ್ರಿಟಿಷರ ಕಾಲದ ಕಾನೂನುಗಳನ್ನು ಪರಿಷ್ಕರಿಸಲಾಗಿದೆ. ನೊಂದವರಿಗೆ ಸಕಾಲಕ್ಕೆ ನೆರವು, ಕಾನೂನು ಕ್ರಮವೂ ಪಾರದರ್ಶಕವಾಗಿರುವುದಕ್ಕೆ ಒತ್ತು ನೀಡಲಾಗಿದೆ ಎಂದು ಎಸ್.ಸುರೇಶ್‌ಕುಮಾರ್ ಹೇಳಿದರು.
ಆನ್‌ಲೈನ್‌ನಲ್ಲಿ ದೂರು ನೀಡುವುದಕ್ಕೂ ವ್ಯವಸ್ಥೆಯಾಗಿದೆ. ದೂರಿಗೆ ಸ್ವೀಕೃತಿ ಪತ್ರ, ದೂರು ಸ್ವೀಕಾರ ಮಾಡುತ್ತಿಲ್ಲವೆಂಬ ದೂರುಗಳೂ ಕೊನೆಯಾಗುತ್ತವೆ. ಜವಾಬ್ದಾರಿ ಹೊತ್ತ ಇಲಾಖೆಯಲ್ಲೂ ದಕ್ಷತೆ, ಕಾರ್ಯಕ್ಷಮತೆ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು.
ಅಪರಾಧ ಕಾಯ್ದೆಗಳಲ್ಲಿ ಅತ್ಯಂತ ಮಹತ್ವ, ಗುರುತರವಾದ ಬದಲಾವಣೆಗಳಾಗಿವೆ. ಮೂಲ ಕಾಯ್ದೆ ಓದಿಕೊಳ್ಳುವ ಜತೆಗೆ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಕುರಿತು ಕಾರ್ಯಾಗಾರಕ್ಕೆ ಮುನ್ನ ಸಸಿಗೆ ನೀರೆರೆದು, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಯಿತು. ಪಕ್ಷದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಇದ್ದರು.