Amit Shah: ಲೋಕಸಭೆಯಲ್ಲಿ ಭಾರೀ ಗದ್ದಲ ಮತ್ತು ಘೋಷಣೆಗಳ ನಡುವೆಯೂ ಗೃಹ ಸಚಿವ ಅಮಿತ್ ಷಾ ಬುಧವಾರ (ಆಗಸ್ಟ್ 20) ನಿರೀಕ್ಷೆಯಂತೆಯೆ ಕನಿಷ್ಠ ಐದು ವರ್ಷಗಳ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಸತತ 30 ದಿನಗಳ ಕಾಲ ಬಂಧಿಸಿದರೆ ಅವರನ್ನು ಪದಚ್ಯುತಗೊಳಿಸಬಹುದು ಮಸೂದೆಯನ್ನು ಮಂಡಿಸಿದರು.
ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ - ಈ ಮೂರು ಮಸೂದೆಗಳನ್ನು ಮಂಡಿಸುವ ವೇಳೆ ವಿಪಕ್ಷಗಳು ಸದಸ್ಯರು ಎದ್ದು ನಿಂತು ಶಾಸನದ ಪ್ರತಿಗಳನ್ನು ಹರಿದು ಹಾಕಿದರು.
ಗಂಭೀರ ಆರೋಪಗಳನ್ನು ಎದುರಿಸುತ್ತಿರುವಾಗಲೂ ನಾವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವುದನ್ನು ಮುಂದುವರಿಸುವಷ್ಟು ನಾಚಿಕೆಯಿಲ್ಲದವರಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ವಿರೋಧ ಪಕ್ಷಗಳು ಈ ಶಾಸನವನ್ನು ಕಠಿಣ ಎಂದು ಕರೆದಿದ್ದು, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಅನಿಯಂತ್ರಿತವಾಗಿ ಬಂಧಿಸುವ ಮೂಲಕ ವಿರೋಧ ಪಕ್ಷಗಳು ಆಳುವ ರಾಜ್ಯಗಳನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರವು ಇದನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿಕೊಂಡಿವೆ.
ನಿಯಮದಂತೆ ಮಸೂದೆಗಳನ್ನು ಜಂಟಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕೆಂದು ಷಾ ಪ್ರಸ್ತಾಪಿಸುತ್ತಿದ್ದಂತೆ, ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಮಸೂದೆಗಳ ಪ್ರತಿಗಳನ್ನು ಹರಿದು ಗೃಹ ಸಚಿವರ ಮೇಲೆ ಎಸೆದರು ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅಮಿತ್ ಷಾ ಮತ್ತು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ನಡುವೆ ಸ್ವಲ್ಪ ಹೊತ್ತು ವಾಕ್ಸಮರವೂ ನಡೆಯಿತು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಷಾ ಬಂಧನವನ್ನು ಕೆಣಕಿದ ಸಂಸದ ಕೆ.ಸಿ. ವೇಣುಗೋಪಾಲ್ ಗೃಹ ಸಚಿವರನ್ನು ಟೀಕಿಸಿದರು. ಈ ಮಸೂದೆ ಸಂವಿಧಾನದ ಮೂಲ ತತ್ವವನ್ನು ಉಲ್ಲಂಘಿಸುತ್ತದೆ. ಅಮಿತ್ ಶಾ ಗುಜರಾತ್ ಗೃಹ ಸಚಿವರಾಗಿದ್ದಾಗ ಅವರನ್ನು ಬಂಧಿಸಲಾಯಿತು. ಆಗ ಅವರು ನೈತಿಕತೆಯನ್ನು ಎತ್ತಿಹಿಡಿದಿದ್ದಾರೆಯೇ? ಎಂದು ವೇಣುಗೋಪಾಲ್ ಪ್ರಶ್ನಿಸಿದರು.
ಇದಕ್ಕೆ ಆಕ್ರೋಶಗೊಂಡ ಷಾ, ಬಂಧನಕ್ಕೊಳಗಾಗುವ ಮೊದಲೇ ಗುಜರಾತ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ತೀರುಗೇಟು ನೀಡಿದರು. ತಮ್ಮ ವಿರುದ್ಧ ಸುಳ್ಳು ಆರೋಪಗಳಿದ್ದವು. ಆದರೂ ವಿಚಾರಣೆ ನಡೆಯುವರೆಗೂ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದೆ. ನ್ಯಾಯಾಲಯವು ಎಲ್ಲಾ ಆರೋಪಗಳಿಂದ ತಮ್ಮನ್ನು ಮುಕ್ತಗೊಳಿಸುವವರೆಗೂ ಒಂದೇ ಒಂದು ಸಾಂವಿಧಾನಿಕ ಹುದ್ದೆಯನ್ನು ಹೊಂದಿರಲಿಲ್ಲ ಎಂದು ಅಮಿತ್ ಷಾ ತಿಳಿಸಿದರು.(ಏಜೆನ್ಸೀಸ್)