ನ್ಯೂಸ್

ಎದುರಾಳಿಗಳ ಒಗ್ಗಟ್ಟು, ಕೈಗೆ ಇಕ್ಕಟ್ಟು: ಮತ ಗಳಿಕೆ ಹೆಚ್ಚಳಕ್ಕೆ ಆದ್ಯತೆ; ಸಮುದಾಯಗಳು ಸೀಮಿತವಾಗದಂತೆ ತಡೆಯಲು ಸಲಹೆ

Webdesk - Ravikanth

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ವಿಧಾನ ಸಭೆ ಚುನಾವಣೆ ಗೆಲ್ಲಲು ಜಾತಿ ಸಮೀಕರಣದ ಲೆಕ್ಕಹಾಕುತ್ತಿರುವ ಕಾಂಗ್ರೆಸ್​ಗೆ ಎದುರಾಳಿಯ ವಿಭಜನಾ ರಹಿತ ನಡೆಯ ಬಗ್ಗೆ ಚಡಪಡಿಕೆ ಶುರುವಾಗಿದೆ. ಚುನಾವಣೆ ತಂತ್ರಗಾರಿಕೆ ಭಾಗವಾಗಿ ನಡೆದಿರುವ ಪಕ್ಷದ ಸಭೆಗಳಲ್ಲಿ ಮತಗಳಿಕೆ ವಿಷಯ ವಾಗಿ ವಿಚಾರ ವಿನಿಮಯವಾಗಿದೆ. ಮುಖ್ಯವಾಗಿ ಇತ್ತೀಚಿನ ಚುನಾವಣೆಯನ್ನು ಗಮನಿಸಿದಾಗ ಎದುರಾಳಿ ಪಕ್ಷ ಇಬ್ಭಾಗವಾದ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಬಿಜೆಪಿ ಅಥವಾ ಜನತಾ ಪರಿವಾರ ವಿಭಜನೆಯಾದ ಸಂದರ್ಭದಲ್ಲಿ ಕೈಗೆ ಅಧಿಕಾರ ಸಿಕ್ಕಿದೆ. ಈ ಬಾರಿ ಅಂತಹ ಸಾಧ್ಯತೆಗಳಿಲ್ಲವಾಗಿದೆ. ಹೀಗಾಗಿ ಮತ ಹೆಚ್ಚಳವೊಂದೇ ಪಕ್ಷಕ್ಕಿರುವ ಮಾರ್ಗ, ಈ ಬಗ್ಗೆ ಸ್ಪಷ್ಟ ಅರಿವು ಇರಬೇಕೆಂದು ಪಕ್ಷದ ದೆಹಲಿ ನಾಯಕರು ರಾಜ್ಯದ ಮುಖಂಡರಿಗೆ ಬೋಧನೆ ಮಾಡಿದ್ದಾರೆ.

ಪಕ್ಷಕ್ಕೆ ಯಾವುದೇ ಹಂತದಲ್ಲೂ 75-80 ಸ್ಥಾನಕ್ಕೆ ಕೊರತೆಯಾಗದ ತಳಪಾಯ ರಾಜ್ಯದಲ್ಲಿದೆ. ಆದರೆ, ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ ಪಡೆಯುವುದು ಅಷ್ಟು ಸಲೀಸಲ್ಲ. ಇದೇ ಕಾರಣಕ್ಕೆ ಪ್ರಬಲ ಲಿಂಗಾಯತ ಮತದ ದೊಡ್ಡ ಪಾಲು ಬಿಜೆಪಿ ಕಡೆ ವಾಲುವುದನ್ನು ತಡೆಯಬೇಕು ಮತ್ತು ಒಕ್ಕಲಿಗ ಮತಗಳು ಜೆಡಿಎಸ್​ಗೆ ಸೀಮಿತವಾಗದಂತೆ ನೋಡಿಕೊಳ್ಳಬೇಕೆಂದು ಪ್ರಮುಖ ನಾಯಕರಿಗೆ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಸ್ತುತ ಮುಸ್ಲಿಂ ಮತಗಳು ದೊಡ್ಡ ಭಾಗ ಕಾಂಗ್ರೆಸ್ ಜತೆಗೆ ನಿಲ್ಲಲಿದೆ. ಜತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣಕ್ಕೆ ಕುರುಬ ಸಮುದಾಯದ ದೊಡ್ಡ ಪಾಲು ಕೈ ಹಿಡಿಯಬಹುದು. ಆದರೆ, ಈ ಸಮೀಕರಣ ಸಾಲದು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಮತಗಳು ಹೆಚ್ಚಿನ ಪಾಲು ಬರಬೇಕಾಗುತ್ತದೆ ಎಂಬ ಸಮೀಕರಣವೊಂದು ಕಾಂಗ್ರೆಸ್​ನಲ್ಲಿ ಸಿದ್ಧವಾಗಿದೆ.

ಎದುರಾಳಿ ಬಿಜೆಪಿಯು ಎಸ್ಸಿ,ಎಸ್ಟಿ ಸಮುದಾಯದ ಮೀಸಲು ಪ್ರಮಾಣ ಹೆಚ್ಚಿಸುವ ನಿರ್ಧಾರದ ಮೂಲಕ ದಾಳ ಉರುಳಿಸಿದೆ. ಜತೆಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ನಿರ್ಧಾರ ಮಾಡಿ ಜಾರಿ ಮಾಡಿದೆ. ಇದರ ಪರಿಣಾಮ ಕೊಂಚ ಕೆಲಸ ಮಾಡಿದರೂ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಲಿದೆ. ಇದೇ ಕಾರಣಕ್ಕೆ ಪಕ್ಷದ ಕಡೆಯಿಂದ ರಾಜ್ಯದ ಪ್ರತಿ ಎಸ್ಸಿ, ಎಸ್ಟಿ ಮನೆಗೂ ಭೇಟಿಕೊಡಬೇಕೆಂಬ ನಿರ್ಣಯಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಅವಕಾಶ ಪಡೆದಿರುವುದರ ಲಾಭ ಆಗಬೇಕೆಂದು ರಾಜ್ಯ ನಾಯಕರು ಬಯಸಿದ್ದಾರೆ.

ಡಿ.ಕೆ.ಶಿವಕುಮಾರ್ ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಪ್ರಜ್ವಲಿಸಬೇಕು, ಇದರ ಪರಿಣಾಮ ಮತಗಳಾಗಿ ಪರಿವರ್ತನೆ ಆಗಬೇಕು, ಈ ಮೂಲಕ ಜೆಡಿಎಸ್ ಬಲಿಷ್ಠವಾಗಿರುವ ಕಡೆ ಆ ಪಕ್ಷಕ್ಕೆ ಪೆಟ್ಟುಕೊಡಬೇಕೆಂಬ ಗುರಿಯನ್ನೂ ನೀಡಲಾಗಿದೆ. 1999, 2004, 2008, 2013, 2018ರ ವಿಧಾನಸಭೆ ಚುನಾವಣೆಯ ಮತಗಳಿಕೆಯನ್ನು ಪರಿಗಣಿಸಿದರೆ ಕಾಂಗ್ರೆಸ್​ಗೆ ಸರಾಸರಿ ಶೇ.37 ಮತ ಇದ್ದೇ ಇದೆ. ಐದು ಚುನಾವಣೆಯಲ್ಲಿ ಕನಿಷ್ಠ ಮತ 2008ರಲ್ಲಿ ಶೇ.34 ಬಂದಿದೆ. ಇದೇ ಲೆಕ್ಕಾಚಾರದ ಇನ್ನೊಂದು ಮಗ್ಗುಲಲ್ಲಿ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಕಾಂಗ್ರೆಸ್ ಮತಗಳಿಕೆ ಹೆಚ್ಚಿತ್ತು, ಸ್ಥಾನಗಳು ಕಡಿಮೆ ಇತ್ತು.

ಗಮನಾರ್ಹ ಸಂಗತಿ ಎಂದರೆ ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಮತ ಗಳಿಕೆ ನಿಧಾನವಾಗಿ ಏರುಗತಿಯಲ್ಲಿದೆ. 1999ರಲ್ಲಿ ಶೇ.30.99ರಷ್ಟಿದ್ದಿದ್ದು, 2018ರಲ್ಲಿ ಶೇ.36.43ಕ್ಕೆ ಏರಿಕೆಯಾಗಿದೆ. ಈ ಏರಿಕೆಯಲ್ಲಿ ಬಹುಪಾಲು ಎಸ್ಸಿಎಸ್ಟಿ, ಹಿಂದುಳಿದ ಸಮುದಾಯದ್ದೇ ಆಗಿದೆ. ಈ ಬೆಳವಣಿಯ ಅಂಶಗಳ ಆಧಾರದ ಮೇಲೆ ಕಾಂಗ್ರೆಸ್ ಸಭೆ ನಡೆದಿದ್ದು, ಈ ಬಾರಿ ಶೇ.4ರಿಂದ 5ರಷ್ಟಾದರೂ ಮತಗಳಿಕೆ ಹೆಚ್ಚಬೇಕು ಇಲ್ಲವಾದರೆ ಅತಂತ್ರ ಪರಿಸ್ಥಿತಿ ನಿರ್ವಣವಾದೀತು ಎಂದು ದೆಹಲಿ ನಾಯಕರು ರಾಜ್ಯ ನಾಯಕರಿಗೆ ಚುರುಕುಮುಟ್ಟಿಸಿದ್ದಾರೆ.

12ರಲ್ಲಿ 4 ಮಾತ್ರ ಯಶ: 2023ರ ವಿಧಾನಸಭೆ ಚುನಾವಣೆ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಒಡೆಯುವ ಲೆಕ್ಕಾಚಾರ ಹಾಕಿಕೊಂಡು ಒಂದು ವರ್ಷದ ಹಿಂದೆಯೇ ಪ್ರಯತ್ನ ನಡೆಸಿದ್ದು ಗುಟ್ಟಾಗಿ ಉಳಿದ ವಿಚಾರವೇನಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್​ನ 12 ಶಾಸಕರನ್ನು ಖುದ್ದು ಮಾತನಾಡಿಸಿ ಕಾಂಗ್ರೆಸ್​ಗೆ ಆಹ್ವಾನಿಸಿದ್ದರು. ಡಿ.ಕೆ.ಶಿವಕುಮಾರ್ ಕೂಡ ತಮ್ಮ ಪ್ರಯತ್ನ ಮಾಡಿದ್ದರು. 12ರ ಪೈಕಿ ಗುಬ್ಬಿ , ಕೋಲಾರ ಶಾಸಕರು ಜೆಡಿಎಸ್​ಗೆ ಸೆಡ್ಡು ಹೊಡೆದಿದ್ದಾರೆ. ಅರಕಲಗೂಡು, ಅರಸೀಕೆರೆ ಶಾಸಕರು ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದವರು ಒಂದು ಹೆಜ್ಜೆ ಮುಂದಿಟ್ಟವರು ಪುನಃ ಗೌಡರ ಪಾಳಯ ಸೇರಿದರು. ಉಳಿದವರೂ ಸಹ ಇದೇ ಹಾದಿ ಹಿಡಿದರು.

ಹತ್ತನೇ ವಿಧಾನಸಭೆ ಚುನಾವಣೆಯ ಸಾರ

  • 2018ರಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಯಿತು. ಮತಗಳಿಕೆಯಲ್ಲಿ ಕಾಂಗ್ರೆಸ್ ಮೊದಲಾಗಿತ್ತು.
  • 2013ರಲ್ಲಿ ಬಿಜೆಪಿ ಒಡೆದ ಮನೆಯಾಗಿತ್ತು. ಕೆಜೆಪಿ, ಬಿಎಸ್​ಆರ್ ಬಿಜೆಪಿ ಮತ ಒಡೆದಿತ್ತು.
  • 2008ರಲ್ಲಿ ಬಿಜೆಪಿ 110 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಯಿತು.
  • 2004ರಲ್ಲಿ ಅತಂತ್ರ ಸ್ಥಿತಿ ನಿರ್ವಣವಾಗಿತ್ತು. ಜೆಡಿಎಸ್ ಗಣನೀಯ ಸ್ಥಾನ ಪಡೆದಿತ್ತು.
  • 1999ರ ಚುನಾವಣೆಯಲ್ಲಿ ಜನತಾ ಪರಿವಾರ ವಿಭಜನೆಯಾಗಿತ್ತು. ಕೈಗೆ ಅಧಿಕಾರ ಒಲಿದಿತ್ತು.
  • 1994ರಲ್ಲಿ ಜನತಾದಳ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ 34 ಸ್ಥಾನಕ್ಕೆ ಕುಸಿದಿತ್ತು.
  • 1989ರಲ್ಲಿ ಕಾಂಗ್ರೆಸ್ ಶೇ.43 ಮತಗಳೊಂದಿಗೆ ಐತಿಹಾಸಿಕ ಎಂಬಂತೆ 178 ಸ್ಥಾನ ಗಳಿಸಿತ್ತು.
  • 1985ರಲ್ಲಿ ಜನತಾ ಪಕ್ಷ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್ 65 ಸ್ಥಾನಗಳಷ್ಟೇ ಪಡೆದಿತ್ತು.
  • 1983ರಲ್ಲಿ ಜನತಾ ಪಕ್ಷ ದೊಡ್ಡ ಪಕ್ಷವಾಗಿ ಆರಿಸಿಬಂದಿತ್ತು. ಆದರೆ ಶೇ.40.32 ಮತ ಪಡೆದಿತ್ತು.
  • 1978ರಲ್ಲಿ ಕಾಂಗ್ರೆಸ್ 149 ಸ್ಥಾನಗಳೊಂದಿಗೆ ಜಯಭೇರಿ ಭಾರಿಸಿತ್ತು.