ಸಾಮರ್ಥ್ಯ ಸಾಬೀತುಪಡಿಸಿದ ಝೆಲೆನ್ಸ್ಕಿ | ರಷ್ಯಾಗೆ ಭಾರಿ ಹಾನಿ, ಯೂಕ್ರೇನ್ನ ಸಾಧನೆ ಎಂದು ಬಣ್ಣನೆ
ನವದೆಹಲಿ: ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಯೂಕ್ರೇನ್ ನಡೆಸಿದ ಡ್ರೋನ್ ದಾಳಿಗೆ ರಷ್ಯಾದ ವಾಯುಪಡೆಯ ಹತ್ತಾರು ವಿಮಾನಗಳು ಧ್ವಂಸಗೊಂಡಿವೆ. ‘ಆಪರೇಷನ್ ಸ್ಪೈಡರ್ ವೆಬ್’ ಹೆಸರಿನಲ್ಲಿ ನಡೆಸಿದ ಈ ಸಂಕೀರ್ಣ ದಾಳಿಯ ಮೂಲಕ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಡ್ರೋನ್ ದಾಳಿಯ ಬಳಿಕ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಝೆಲೆನ್ಸ್ಕಿ ‘ಇಂದು ಅದ್ಭುತ ಫಲಿತಾಂಶ, ಯೂಕ್ರೇನ್ ಏಕಾಂಗಿಯಾಗಿ ಈ ಸಾಧನೆ ಮಾಡಿದೆ’ ಎಂದು ತಿಳಿಸಿದ್ದಾರೆ. ಇದು ನೇರವಾಗಿ ಪುತಿನ್ಗೆ ಕೊಟ್ಟಿರುವ ಉತ್ತರವಾಗಿದೆ. ಪುತಿನ್ ಜತೆಗೆ ಪರೋಕ್ಷವಾಗಿ ಟ್ರಂಪ್ಗೂ ಝೆಲೆನ್ಸ್ಕಿ ಸಂದೇಶ ತಲುಪಿಸಿದ್ದಾರೆ. ಯಾಕೆಂದರೆ ಕಳೆದ ಮಾರ್ಚ್ ನಲ್ಲಿ ಝೆಲೆನ್ಸ್ಕಿ ಅಮೆರಿಕಕ್ಕೆ ತೆರಳಿ ಟ್ರಂಪ್ ಜತೆ ಮಾತುಕತೆ ನಡೆಸಿದ್ದರು. ಈ ವೇಳೆ ನಿಮ್ಮ ಬಳಿ ಯಾವುದೇ ಕಾರ್ಡ್ಗಳಿಲ್ಲ. ನನ್ನೊಂದಿಗಿದ್ದರೆ ಮಾತ್ರ ನಿಮ್ಮ ಬಳಿ ಕಾರ್ಡ್ ಇರಲಿದೆ ಎಂದು ಟ್ರಂಪ್ ತಿಳಿಸಿದ್ದರು. ಜತೆಗೆ ಅಂದಿನ ಸಭೆಯಲ್ಲಿ ಉಭಯ ನಾಯಕರ ನಡುವೆ ವಾಗ್ವಾದ ನಡೆದು ಝೆಲೆನ್ಸ್ಕಿ ಅರ್ಧದಲ್ಲೇ ಸಭೆಯಿಂದ ಹೊರಬಂದಿದ್ದರು. ಆ ಬಳಿಕ ಯೂಕ್ರೇನ್ಗೆ ನೀಡುತ್ತಿದ್ದ ಮಿಲಿಟರಿ ನೆರವು ಮತ್ತು ಗುಪ್ತಚರ ಮಾಹಿತಿ ಹಂಚಿಕೆಯನ್ನು ಅಮೆರಿಕ ನಿಲ್ಲಿಸಿತ್ತು. ಇವೆಲ್ಲ ಅಡೆತಡೆಗಳ ಹೊರತಾಗಿಯೂ ಯೂಕ್ರೇನ್ ಸೇನೆ ಅತ್ಯಂತ ಕ್ಲಿಷ್ಟಕರ ಮತ್ತು ಯೋಜನಾಬದ್ಧ ಕಾರ್ಯಾಚರಣೆ ನಡೆಸಿತ್ತು. 4300 ಕಿ.ಮೀ. ದೂರದ ಸೈಬೀರಿಯಾದಲ್ಲಿರುವ ವಾಯುನೆಲೆ ಮತ್ತು 2000 ಕಿ.ಮೀ. ದೂರದಲ್ಲಿರುವ ವಾಯುನೆಲೆಯ ಮೇಲೆ ನಡೆಸಿದ ಈ ಡ್ರೋನ್ ದಾಳಿಯಿಂದಾಗಿ ರಷ್ಯಾಗೆ ದೊಡ್ಡಮಟ್ಟದ ಹಾನಿ ಸಂಭವಿಸಿದೆ ಎಂದು ಯೂಕ್ರೇನ್ ತಿಳಿಸಿದೆ.
ಯೂಕ್ರೇನ್ ಸೇನೆ ರಷ್ಯಾದ ಮುರ್ಮನ್ಸ್ಕ್ ಇರ್ಖೂಟ್ಸ್ಕ್ ಇವೆನೊವೊ, ರಿಯಾಜಾನ್ ಮತ್ತು ಅಮುರ್ ಪ್ರದೇಶದಲ್ಲಿರುವ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಒಂದೂವರೆ ವರ್ಷ ಯೋಜನೆ ರೂಪಿಸಿ 117 ಡ್ರೋನ್ಗಳ ಮೂಲಕ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ವಾಯುನೆಲೆಗಳಲ್ಲಿ ಇದ್ದ ಕ್ರೂಸ್ ಮಿಸೈಲ್ಗಳ ಪೈಕಿ ಶೇ. 34 ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ. ರಷ್ಯಾ ಯೂಕ್ರೇನ್ ಮೇಲೆ ದೊಡ್ಡ ದಾಳಿ ನಡೆಸಲು ಸಿದ್ಧವಾಗಿದೆ ಎಂಬ ಮಾಹಿತಿ ಆಧರಿಸಿ ಬಾಂಬರ್, ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಇಸ್ತಾಂಬುಲ್ನಲ್ಲಿ ಸೋಮವಾರ ರಷ್ಯಾ-ಯೂಕ್ರೇನ್ ಎರಡೂ ದೇಶಗಳ ನಿಯೋಗಗಳು ಕದನ ವಿರಾಮದ ಕುರಿತು ಎರಡನೇ ಸಭೆ ನಡೆಸಿವೆ. ಯೂಕ್ರೇನ್ ರಕ್ಷಣಾ ಸಚಿವ ರುಸ್ತೆಂ ಉಮೆರೊವ್ ನೇತೃತ್ವದಲ್ಲಿ 14 ಮಂದಿ ನಿಯೋಗ ಇದರಲ್ಲಿ ಭಾಗಿಯಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಲಹೆಗಾರ ವ್ಲಾದಿಮಿರ್ ಮೆಡಿನ್ಸ್ಕಿ ನೇತೃತ್ವದಲ್ಲಿ ರಷ್ಯಾ ನಿಯೋಗದ ಸದಸ್ಯರು ಭಾಗಿಯಾದರು. ಸುಮಾರು ಒಂದು ಗಂಟೆಯ ಮಾತುಕತೆ ನಡೆದಿದ್ದು, ವಿವರಗಳು ಬಹಿರಂಗವಾಗಿಲ್ಲ.
ನಾವು ಯುದ್ಧವನ್ನು ಬಯಸುತ್ತಿಲ್ಲ, ರಷ್ಯಾದೊಂದಿಗೆ ಕದನ ವಿರಾಮ ಬಯಸುತ್ತಿದ್ದೇವೆ. ಮಾ.11ರಂದು ಅಮೆರಿಕದಲ್ಲಿ ನಡೆದ ಸಭೆ ಬಳಿಕ ಯಾವುದೇ ಷರತ್ತುಗಳಿಲ್ಲದ ಕದನ ವಿರಾಮಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಇಡೀ ವಿಶ್ವವೂ ಯುದ್ಧ ಕೊನೆಗೊಳಿಸುವಂತೆ ಆಗ್ರಹಿಸುತ್ತಿದೆ. ಆದರೆ ರಷ್ಯಾ ಯುದ್ಧ ಮುಂದುವರಿಸುತ್ತಿದೆ.
| ವೊಲೊದಿಮಿರ್ ಝೆಲೆನ್ಸ್ಕಿ ಯೂಕ್ರೇನ್ ಅಧ್ಯಕ್ಷ