ನ್ಯೂಸ್

ನಮ್ಮ ಮೇಲಿನ ಈ ದಾಳಿ... ಆಪರೇಷನ್ ಸಿಂಧೂರ ಬಗ್ಗೆ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಶಾಕಿಂಗ್​ ಹೇಳಿಕೆ! Operation Sindoor

Operation Sindoor : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಪ್ರತೀಕಾರದ ಕ್ರಮ ಕೈಗೊಂಡಿದೆ. 'ಆಪರೇಷನ್ ಸಿಂಧೂರ' ಹೆಸರಿನಲ್ಲಿ, ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಜಂಟಿ ದಾಳಿ ನಡೆಸಿವೆ. ಮಂಗಳವಾರ ಮಧ್ಯರಾತ್ರಿಯ ನಂತರ ಒಟ್ಟು ಒಂಬತ್ತು ಪ್ರದೇಶಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದ್ದು, 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಭಾರತೀಯ ಸೇನೆಯ ಮಿಂಚಿನ ದಾಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು, ದ್ರೋಹಿ ಶತ್ರು ಪಾಕಿಸ್ತಾನದ ಐದು ಪ್ರದೇಶಗಳಲ್ಲಿ ಹೇಡಿತನದ ದಾಳಿ ನಡೆಸಿದ್ದಾನೆ. ಈ ಕ್ರಮಗಳಿಗೆ ಪಾಕಿಸ್ತಾನ ಖಂಡಿತವಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಈ ಸಮಯದಲ್ಲಿ, ಇಡೀ ದೇಶ ಪಾಕಿಸ್ತಾನ ಸೇನೆಯೊಂದಿಗೆ ನಿಂತಿದೆ. ಪಾಕಿಸ್ತಾನ ಮತ್ತು ಸೇನೆಯು ಶತ್ರುವನ್ನು ಹೇಗೆ ಎದುರಿಸಬೇಕೆಂದು ತಿಳಿದಿದೆ. ಶತ್ರುವಿನ ಯೋಜನೆ ಯಾವುದೇ ಸಂದರ್ಭದಲ್ಲೂ ಪೂರೈಸಲು ಬಿಡುವುದಿಲ್ಲ" ಎಂದು ಎಕ್ಸ್​ ಖಾತೆಯಲ್ಲಿ ಶೆಹಬಾಜ್ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ, ಭಾರತದ ದಾಳಿಯ ನಂತರ ಪಾಕಿಸ್ತಾನ ತೀವ್ರ ಕಟ್ಟೆಚ್ಚರದಲ್ಲಿದೆ. ಲಾಹೋರ್ ಮತ್ತು ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳನ್ನು 48 ಗಂಟೆಗಳ ಕಾಲ ಮುಚ್ಚಿದೆ. ಪಾಕಿಸ್ತಾನ ಪ್ರಧಾನಿ ಷರೀಫ್ ಬುಧವಾರ ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಭದ್ರತಾ ಸಮಿತಿಯನ್ನು ಭೇಟಿ ಮಾಡಲಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಪ್ರಧಾನಿಯ ಘೋಷಣೆಯ ನಂತರ, ಪಾಕಿಸ್ತಾನ ಸೇನೆಯು ಗಡಿಯುದ್ದಕ್ಕೂ ಪೂಂಚ್ ಮತ್ತು ರಾಜೌರಿ ವಲಯಗಳಲ್ಲಿ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ-ಮೊಹಮ್ಮದ್ (ಜೆಇಎಂ), ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಗಡಿಯಾಚೆಗಿನ ಕಾರ್ಯಾಚರಣೆ ನಡೆಸಿದೆ. ಆಪರೇಷನ್​ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಹಲ್ಗಾಮ್​ನಲ್ಲಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡುವ ಮೂಲಕ ಅನೇಕ ಮಹಿಳೆಯರ ಹಣೆಯ ಸಿಂಧೂರ ಅಳಿಸಿ ಹಾಕಿದ್ದಕ್ಕೆ ಪ್ರತಿಯಾಗಿ ಆಪರೇಷನ್​ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.

ಹಿರಿಯ ಅಧಿಕಾರಿಗಳ ಪ್ರಕಾರ, ಜೆಇಎಂನ ಪ್ರಬಲ ಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿಗಳನ್ನು ನಡೆಸಲಾಗಿದ್ದು, ಪ್ರತಿ ಸ್ಥಳದಲ್ಲಿ ಅಂದಾಜು 25 ರಿಂದ 30 ಭಯೋತ್ಪಾದಕರು ಮೃತಪಟ್ಟಿದ್ದಾರೆ. ಮುರಿಡ್ಕೆಯಲ್ಲಿ, ಎಲ್‌ಇಟಿಯ ಕೇಂದ್ರ ಮತ್ತು ಸೈದ್ಧಾಂತಿಕ ಪ್ರಧಾನ ಕಚೇರಿಯಾದ ಮಸ್ಜಿದ್ ವಾ ಮರ್ಕಜ್ ತೈಬಾ ಭಾರತೀಯ ಸೇನೆಯ ಗುರಿಯಾಗಿತ್ತು. ಇದನ್ನು ದೀರ್ಘಕಾಲದಿಂದ ಪಾಕಿಸ್ತಾನದ “ಭಯೋತ್ಪಾದನಾ ನರ್ಸರಿ” ಎಂದು ಪರಿಗಣಿಸಲಾಗಿದೆ.

ಇತರ ಗುರಿ ಸ್ಥಳಗಳಲ್ಲಿ ಸಾವುನೋವುಗಳ ಸಂಖ್ಯೆಯನ್ನು ಗುಪ್ತಚರ ಸಂಸ್ಥೆಗಳು ಇನ್ನೂ ಪರಿಶೀಲಿಸುತ್ತಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಒಟ್ಟು 80 ರಿಂದ 90 ಭಯೋತ್ಪಾದಕರನ್ನು ಮಟ್ಟಹಾಕಲಾಗಿದೆ. ದಾಳಿಗೊಳಗಾದ ಸ್ಥಳಗಳಲ್ಲಿ ಜೆಇಎಂ ಮತ್ತು ಎಲ್‌ಇಟಿ ನಿರ್ವಹಿಸುವ ಲಾಂಚ್ ಪ್ಯಾಡ್‌ಗಳು, ತರಬೇತಿ ಶಿಬಿರಗಳು ಮತ್ತು ಮೂಲಭೂತೀಕರಣ ಕೇಂದ್ರಗಳು ಸೇರಿವೆ.

ಈ ಮೆಗಾ ದಾಳಿಯ ನಂತರದ ಹೇಳಿಕೆಯಲ್ಲಿ, ಭಾರತೀಯ ಸೇನೆಯು “ನ್ಯಾಯವು ಸಿಕ್ಕಿದೆ” ಎಂಬ ಸಂದೇಶದೊಂದಿಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದೆ. (ಏಜೆನ್ಸೀಸ್​)