ನ್ಯೂಸ್

ಪಾಕ್​ ಭಯೋತ್ಪಾದಕ ವ್ಯವಸ್ಥೆ ಕೊನೆಗೊಳಿಸುವುದೇ ಭಾರತದ ಗುರಿ: ವಿದೇಶಾಂಗ ಕಾರ್ಯದರ್ಶಿ ಹೇಳಿಕೆ! Operation Sindoor

Operation Sindoor : ಭಾರತದ ಆಪರೇಷನ್​ ಸಿಂಧೂರ ದಾಳಿಯು ಪಾಕಿಸ್ತಾನದ ಭಯೋತ್ಪಾದಕ ವ್ಯವಸ್ಥೆಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದರು.

ಆಪರೇಷನ್​ ಸಿಂಧೂರ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದರು.

2025, ಏಪ್ರಿಲ್ 22 ರಂದು, ಎಲ್‌ಇಟಿ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 25 ಭಾರತೀಯ ಪ್ರಜೆಗಳು ಮತ್ತು 1 ನೇಪಾಳಿ ನಾಗರಿಕರನ್ನು ಕೊಂದರು. ಅವರು ಪ್ರವಾಸಿಗರ ತಲೆಗೆ ಅವರ ಕುಟುಂಬ ಸದಸ್ಯರ ಮುಂದೆ ಗುಂಡು ಹಾರಿಸಿದರು. ಈ ವೇಳೆ ಕುಟುಂಬಗಳಿಗೆ ಬೆದರಿಕೆ ಹಾಕಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಮತ್ತೆ ಅಭಿವೃದ್ಧಿ ಹೊಂದುತ್ತಿರುವುದರಿಂದ, ದಾಳಿಯ ಮುಖ್ಯ ಉದ್ದೇಶ ಅದನ್ನು ಹಾನಿಗೊಳಿಸುವುದಾಗಿತ್ತು. ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪು ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಗುಂಪು ಲಷ್ಕರ್-ಇ- ತೊಯ್ಬಾ ಜೊತೆ ಸಂಪರ್ಕ ಹೊಂದಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಸಂಪರ್ಕ ಇರುವುದು ಸಾಬೀತಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದರು.

ಏಪ್ರಿಲ್ 25 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಧ್ಯಮ ಪ್ರಕಟಣೆಯಿಂದ TRF ಉಲ್ಲೇಖವನ್ನು ತೆಗೆದುಹಾಕಲು ಪಾಕಿಸ್ತಾನ ಹಾಕಿದ ಒತ್ತಡವನ್ನು ನಿರ್ಲಕ್ಷಿಸುವಂತಿಲ್ಲ. ಈ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಯೋತ್ಪಾದಕರೊಂದಿಗೆ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಗಮನಿಸುತ್ತಿರುವ ನಮ್ಮ ಗುಪ್ತಚರ ಸಂಸ್ಥೆಗಳು ಭಾರತದ ಮೇಲೆ ಹೆಚ್ಚಿನ ದಾಳಿಗಳು ನಡೆಯಬಹುದು ಎಂದು ಸೂಚಿಸಿವೆ ಮತ್ತು ಅವುಗಳನ್ನು ನಿಲ್ಲಿಸುವುದು ಮತ್ತು ನಿಭಾಯಿಸುವುದು ಅತ್ಯಗತ್ಯವೆಂದು ಭಾವಿಸಲಾಗಿದೆ ಎಂದು ವಿಕ್ರಮ್​ ಮಿಶ್ರಿ ಹೇಳಿದರು.

ಪಹಲ್ಗಾಮ್ ದಾಳಿಯ ಅಪರಾಧಿಗಳು ಮತ್ತು ಯೋಜಕರನ್ನು ನ್ಯಾಯದ ಕಟಕಟೆಗೆ ತರುವುದು ಅತ್ಯಗತ್ಯವೆಂದು ಪರಿಗಣಿಸಲಾಗಿತ್ತು. ಹದಿನೈದು ದಿನಗಳು ಕಳೆದರೂ, ಪಾಕಿಸ್ತಾನವು ತನ್ನ ಪ್ರದೇಶದಲ್ಲಿನ ಭಯೋತ್ಪಾದಕರ ಮೂಲಸೌಕರ್ಯದ ವಿರುದ್ಧ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನ್ಯಾಯ ಒದಗಿಸಲು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಲಾಯಿತು ಎಂದರು. ಅಲ್ಲದೆ, ಮುಂಡ್ರಿಕೆ ಸೇರಿದಂತೆ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿರುವ ಇತರ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ದಾಳಿಗಳನ್ನು ತೋರಿಸುವ ವಿಡಿಯೋಗಳನ್ನು ಪ್ರಸ್ತುತಪಡಿಸಿದರು.

ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್ ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿದವು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ನಾಶಪಡಿಸಲಾಯಿತು. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಮತ್ತು ಯಾವುದೇ ನಾಗರಿಕ ಜೀವಹಾನಿಯನ್ನು ತಪ್ಪಿಸಲು ಸ್ಥಳಗಳನ್ನು ಆಯ್ಕೆ ಮಾಡಿ ದಾಳಿ ಮಾಡಲಾಯಿತು ಎಂದರು.

ರೆಸಿಸ್ಟೆನ್ಸ್ ಫ್ರಂಟ್ ಎಂದು ಕರೆದುಕೊಳ್ಳುವ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಗುಂಪು ವಿಶ್ವಸಂಸ್ಥೆಯ ನಿಷೇಧಿತ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾದ ಒಂದು ಅಂಗಸಂಸ್ಥೆಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ನಡೆಸಲಾದ ತನಿಖೆಗಳು ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವಿನ ಸಂಪರ್ಕವನ್ನು ಹೊರಗೆಳೆದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದರು.

ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿರುವ ಮುಂಡ್ರಿಕೆ ಮತ್ತು ಇತರ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ಬಹು ದಾಳಿಗಳ ವಿಡಿಯೋವನ್ನು ಪ್ರದರ್ಶಿಸಿ, ಯಾವುದೇ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ನಾಗರಿಕರ ಸಾವುನೋವುಗಳ ಬಗ್ಗೆ ಯಾವುದೇ ವರದಿಗಳಿಲ್ಲ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರು ಹೇಳಿದರು. (ಏಜೆನ್ಸೀಸ್​)