ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಪ್ರತೀಕಾರವನ್ನು ಇಡೀ ದೇಶ ಬಯಸುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ‘ಭಯೋತ್ಪಾದಕರು ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲ. ಹುಡುಕಿ ಶಿಕ್ಷಿಸುತ್ತೇವೆ’ ಎಂದು ದೇಶಕ್ಕೆ ಭರವಸೆ ನೀಡಿದ್ದರು. ಹಾಗಾಗಿಯೇ, ತನಿಖೆಯ ಹೊಣೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೆಗಲೇರಿತು. ಅಂದಿನಿಂದಲೇ (ಏಪ್ರಿಲ್ 22) ‘ಆಪರೇಷನ್ ಮಹಾದೇವ’ ಕಾರ್ಯಾಚರಣೆ ಆರಂಭಿಸಲಾಯಿತು. ಉಗ್ರರು ಪಾಕಿಸ್ತಾನಕ್ಕೆ ಪರಾರಿಯಾಗದಂತೆ ಕಣ್ಗಾವಲು ಹೆಚ್ಚಿಸಲಾಯಿತು.
ಸ್ಥಳೀಯ ವ್ಯಾಪಾರಿಗಳು, ಕುದುರೆ ಸವಾರರು, ಅಲ್ಲಿನ ನಿವಾಸಿಗಳು ಸೇರಿದಂತೆ ಎನ್ಐಎ 1055 ಜನರನ್ನು 3 ಸಾವಿರ ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದೇ ತನಿಖೆಗೆ ಮಹತ್ವದ ತಿರುವು ಸಿಕ್ಕಿತು. ಈ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿಗೆ ನೀಡಿದ್ದಾರೆ.
ಭಯೋತ್ಪಾದಕರು ಪಹಲ್ಗಾಮ್ ಬೈಸರನ್ ಕಣಿವೆಗೆ ತಲುಪಬೇಕಾದರೆ ಸ್ಥಳೀಯರ ಸಹಕಾರ ಇಲ್ಲದೆ ಅದು ಸಾಧ್ಯವಿಲ್ಲ ಎಂದರಿತ ಎನ್ಐಎ ಈ ‘ಸಹಕಾರ’ ನೀಡಿದವರ ಪತ್ತೆಗೆ ಮುಂದಾಯಿತು. ಮತ್ತು ಖಚಿತ ಸುಳಿವಿನ ಮೇರೆಗೆ ಉಗ್ರರಿಗೆ ನೆರವು ನೀಡಿದ್ದ ಮತ್ತು ಊಟ ಒದಗಿಸಿದ್ದ ಪರ್ವೆಜ್ ಜೋಥರ್ ಮತ್ತು ಬಶೀರ್ ಜೋಥರ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿತು. ಆಗ ಅವರು ಮೂವರು ಉಗ್ರರಿಗೆ ಊಟ ಮತ್ತು ಇನ್ನಿತರ ಸಹಾಯ ನೀಡಿದ್ದನ್ನು ಒಪ್ಪಿಕೊಂಡರು. ಅವರು ನೀಡಿದ ಮಾಹಿತಿಯ ಮೇರೆಗೆ ಉಗ್ರರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿ, ಪತ್ತೆ ಕಾರ್ಯವನ್ನು ತೀವ್ರಗೊಳಿಸಲಾಯಿತು.
ಕಾರ್ಯಾಚರಣೆ ಬಳಿಕ ಪಹಲ್ಗಾಮ್ ಹತ್ಯಾಕಾಂಡಕ್ಕೆ ಬಳಸಲಾಗಿದ್ದ ಎಂ-9 ಮತ್ತು ಎಕೆ-47 ರೈಫಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ದೃಢೀಕರಣಕ್ಕಾಗಿ ವಿಶೇಷ ವಿಮಾನದಲ್ಲಿ ಎಂ-9 ಮತ್ತು ಎಕೆ-47 ರೈಫಲ್ಗಳನ್ನು ಚಂಡೀಗಢದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷೆ ನಡೆಸಲಾಯಿತು. ಉಗ್ರರ ದಾಳಿಯ ಕಾರ್ಟಿಜ್ಗಳ ಎಫ್ಎಸ್ಎಲ್ ತಾಂತ್ರಿಕ ವಿವರದೊಡನೆ ಉಗ್ರರ ರೈಫಲ್ಗಳ ತಾಂತ್ರಿಕ ವಿವರ ತುಲನೆ ಮಾಡಲಾಯಿತು. ದಾಳಿ ನಡೆಸಿದವರು ಈ ಉಗ್ರರೇ ಎನ್ನುವುದು ಈ ಮೂಲಕ ಖಚಿತವಾಯಿತು. ಇಬ್ಬರು ಉಗ್ರರ ಬಳಿಯಿದ್ದ ಪಾಕಿಸ್ತಾನದ ಮತದಾರರ ಗುರುತಿನ ಚೀಟಿ ಮತ್ತು ಪಾಕಿಸ್ತಾನದಲ್ಲಿಯೇ ತಯಾರಿಸಿದ ಚಾಕೊಲೇಟ್ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ಕಾರ್ಯಾಚರಣೆಯಲ್ಲಿ 24 ರಾಷ್ಟ್ರೀಯ ರೈಫಲ್ಸ್, 4 ಪ್ಯಾರಾ ಮಿಲಿಟರಿ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಪಾಲ್ಗೊಂಡಿದ್ದವು.
ಉಗ್ರ ಸಹಕಾರಿಗಳ ಪತ್ತೆ
ಭಯೋತ್ಪಾದಕರಿಗೆ ಆಶ್ರಯ ಮತ್ತು ಆಹಾರ ನೀಡಿದವರನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ, ಸ್ಥಳೀಯರ ವಿಚಾರಣೆಯಿಂದ ಈ ಬಗೆಗಿನ ಮಾಹಿತಿ ಕಲೆ ಹಾಕುವಲ್ಲಿ ಎನ್ಐಎ ಯಶಸ್ವಿಯಾಯಿತು. ಬೈಸರನ್ ಕಣಿವೆಯಿಂದ 3-4 ಕಿ.ಮೀ.ಗಳ ಅಂತರದಲ್ಲಿ ನೆಲೆಸಿದ್ದ ಪರ್ವೆಜ್ ಮತ್ತು ಬಶೀರ್ ಉಗ್ರರಿಗೆ ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ಜೂನ್ 22ರಂದು ದೊರೆಯುತ್ತಿದ್ದಂತೆ, ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು. ಏಪ್ರಿಲ್ 21ರಂದು ರಾತ್ರಿ 8 ಗಂಟೆಯ ಸಮಯ (ಪಹಲ್ಗಾಮ್ ಉಗ್ರದಾಳಿಯ ಹಿಂದಿನ ದಿನ ). ಬಶೀರ್ ಹಾಗೂ ಪರ್ವೆಜ್ ಮನೆಗೆ ಬಂದ ಉಗ್ರರು ಊಟ ನೀಡುವಂತೆ ಕೇಳಿದರು. ಮೂವರೂ ಊಟ ಮಾಡಿ, ಅದರ ಬದಲಿಗೆ 2,500 ರೂ. ನೀಡಿದರು. ಮರುದಿನವೇ ಬೈಸರನ್ ಕಣಿವೆಯಲ್ಲಿ ಈ ಉಗ್ರರು ಪೈಶಾಚಿಕ ದಾಳಿ ನಡೆಸಿದರು. ಆ ಬಳಿಕವೂ ಇವರಿಬ್ಬರ ಮನೆಗೆ ಭೇಟಿ ನೀಡಿ, ನಂತರ ನಾಪತ್ತೆಯಾದರು. ಬಶೀರ್ ಹಾಗೂ ಪರ್ವೆಜ್ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಉಗ್ರರಿಗೆ ಆಶ್ರಯ ನೀಡಿದ್ದನ್ನು ಒಪ್ಪಿಕೊಂಡರು. ಆಪರೇಷನ್ ಮಹಾದೇವದಲ್ಲಿ ಮೂವರೂ ಉಗ್ರರು ಹತರಾದ ಬಳಿಕ ಶವಗಳನ್ನು ಶ್ರೀನಗರಕ್ಕೆ ತಂದು, ಬಶೀರ್ ಹಾಗೂ ಪರ್ವೆಜ್ಗೆ ತೋರಿಸಲಾಯಿತು. ಈ ಉಗ್ರರೇ ದಾಳಿ ನಡೆಸಿದ್ದು ಎಂದು ಬಶೀರ್, ಪರ್ವೆಜ್ ಒಪ್ಪಿಕೊಂಡರು.
ಎರಡು ತಿಂಗಳ ನಿರಂತರ ಶೋಧ
ಗುಪ್ತಚರ ಸಂಸ್ಥೆ ಐಬಿ ಮತ್ತು ಭಾರತೀಯ ಸೇನೆ ಮೇ 22ರಿಂದ ಜುಲೈ 22ರವರೆಗೆ ಎರಡು ತಿಂಗಳ ಕಾಲ ಸಿಗ್ನಲ್ ಟ್ರೖೆಕಿಂಗ್ ಮತ್ತು ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಿದವು. ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಯ ವಿಂಗ್ ‘ದ ರೆಜಿಸ್ಟೆಂಟ್ ಫ್ರಂಟ್’ಗೆ ಸೇರಿದವರಾಗಿದ್ದು, ಗಡಿಯಿಂದ ನುಸುಳಿ ಜಮ್ಮು-ಕಾಶ್ಮೀರಕ್ಕೆ ಬಂದಿದ್ದರು ಎಂಬ ಮಾಹಿತಿ ಈ ಸಂದರ್ಭದಲ್ಲಿ ಖಚಿತವಾಯಿತು.