ಬೆಂಗಳೂರು: ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಬಲಕುಗ್ಗಿಸಲು ಗಮನ ನೀಡಿರುವ ಕಾಂಗ್ರೆಸ್, ಅನ್ಯಪಕ್ಷದ ಶಾಸಕರು, ಅವರ ಬೆಂಬಲಿಗರನ್ನು ತನ್ನತ್ತ ಸೆಳೆಯಲು ಗಮನ ನೀಡಿದೆ.
ಸೋಮವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಶವಂತಪುರ ಬಿಜೆಪಿ ಶಾಸಕ ಸೋಮಶೇಖರ್ ಆಪ್ತರು, ಜೆಡಿಎಸ್‌ನ ಕೆಲವು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಳೆದ ವಾರ ಸೋಮಶೇಖರ್ ಅವರು ಡಿಕೆಶಿ ಹಾಗೂ ಭಾನುವಾರ ಸಿಎಂ ಸಿದ್ದರಾಮಯ್ಯರ ಜತೆ ಚರ್ಚೆ ನಡೆಸಿದ್ದರು.
ಸೋಮಶೇಖರ್ ಆಪ್ತ ನೆಲಮಂಗಲ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಈ ಕಾರ್ಯಾಚರಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದು, ಬಿಬಿಎಂಪಿ ಚುನಾವಣೆ ತಯಾರಿಗೆ ಈ ಚಟುವಟಿಕೆ ಮಹತ್ವ ಪಡೆದುಕೊಂಡಿದೆ.
ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಬಿಜೆಪಿ ಪದಾಧಿಕಾರಿಗಳು, ಗ್ರಾಮಪಂಚಾಯಿತಿ ಸದಸ್ಯರು, ಪಾಲಿಕೆ ಮಾಜಿ ಸದಸ್ಯರನ್ನು ಕಾಂಗ್ರೆಸ್‌ಗೆ ಕಳಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.