Operation Akhal: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರೆಂದು ಭಾರತೀಯ ಸೇನೆ ತಿಳಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆ, ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರ ಯೋಧರಾದ ಲ್ಯಾನ್ಸ್ ನಾಯಕ್ ಕೆ. ಪ್ರೀತ್ಪಾಲ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಅವರ ತ್ಯಾಗವನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಇವರ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ಹುತಾತ್ಮ ಯೋಧರಿಗೆ ಸೇನೆಯು ತೀವ್ರ ಸಂತಾಪ ಸೂಚಿಸುತ್ತದೆ ಮತ್ತು ಮೃತರ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತಿದೆ. ಅಲ್ಲದೆ, ಕಾರ್ಯಾಚರಣೆ ಮುಂದುವರೆದಿದೆ ಎಂದು ಬರೆದುಕೊಂಡಿದೆ.
ಅಲ್ಲದೆ, ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಒಬ್ಬ ಭಯೋತ್ಪಾದಕನ ಶವ ಪತ್ತೆಯಾಗಿರುವ ಬಗ್ಗೆ ಮಾತ್ರ ಅಧಿಕೃತವಾಗಿ ದೃಢಪಟ್ಟಿದೆ.
ಈ ಪ್ರದೇಶದಲ್ಲಿನ ಭಯೋತ್ಪಾದಕರನ್ನು ನಿಗ್ರಹಿಸಲು ಆಪರೇಷನ್ ಅಖಾಲ್ ಅನ್ನು ಭದ್ರತಾ ಪಡೆಗಳು ಆಗಸ್ಟ್ 1 ರಂದು ಪ್ರಾರಂಭಿಸಿದವು. ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತಿಹಾಸದಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಅತಿ ದೀರ್ಘ ಕಾರ್ಯಾಚರಣೆಯಲ್ಲಿ ಇದು ಒಂದು ಎಂದು ಹೇಳಲಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ಇದುವರೆಗೆ 13 ಸೈನಿಕರು ಗಾಯಗೊಂಡಿದ್ದಾರೆ.(ಏಜೆನ್ಸೀಸ್)