ಹೂಗಳಲ್ಲೇ ನಿರ್ಮಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು, ವಿಶ್ವಕಪ್, ನವಶಕ್ತಿ ದುರ್ಗೆಯರ ವಿನ್ಯಾಸಗಳು…ಅಲಂಕಾರಿಕ ಹೂ ಕುಂಡಗಳು, ಕಲ್ಲಿನ ಕಲಾಕೃತಿಗಳು…ಅಷ್ಟೇ ಅಲ್ಲ, ನಾನಾ ಸಾಂಸ್ಕೃತಿಕ ಕಾರ್ಯಕ್ರಮ..!
ಹೀಗೆ, 12 ದಿನಗಳ ಕಾಲ ಸಾರ್ವಜನಿಕರಿಗೆ ಬರಪೂರ ಮನರಂಜನೆ ನೀಡಿದ ದಸರಾ ಫಲಪುಷ್ಪ ಪ್ರದರ್ಶನ ಸೋಮವಾರ ಸಮಾರೋಪಗೊಂಡಿತು.
ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ತೋಟಗಾರಿಕಾ ಇಲಾಖೆ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿದ್ದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವಾರಗಳ ಕಾಲ ಬರೋಬ್ಬರಿ 5 ಲಕ್ಷ ಕ್ಕೂ ಹೆಚ್ಚಿನ ಸಾರ್ವಜನಿಕರು ಪ್ರದರ್ಶನ ವಿಕ್ಷೀಸಿದರು.
ಪ್ರದರ್ಶನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾದ ಯೋಜನೆಗಳ ಪರಿಚಯ, ನೇಗಿಲು ಹೊತ್ತು, ಗನ್ ಹಿಡಿದ ಜೈ ಜವಾನ್ ಜೈ ಕಿಸಾನ್, ಸುವರ್ಣ ಕರ್ನಾಟಕ ಸಂಭ್ರಮ, ಚಾಮುಂಡಿ ಬೆಟ್ಟ, ರಾಜವಂಶಸ್ಥರು, ಸಿರಿಧಾನ್ಯಗಳಿಂದ ರಚಿಸಿದ ಜ್ಯೋತಿ ಬಾಫುಲೆ ಅವರ ಪಾಠಶಾಲೆ, ಸ್ವಚ್ಛ ಸರ್ವೇಕ್ಷಣೆ 2024 ಮಾದರಿಗಳು ನೋಡುಗರ ಗಮನ ಸೆಳೆದವು.
ಕುಪ್ಪಣ್ಣಪಾರ್ಕ್‌ನ ಎಲ್ಲೆಲ್ಲೂ ಬಣ್ಣ ಬಣ್ಣದ ಹೂಗಳು ಕಾಣಸಿಗುತ್ತಿತ್ತು. 20ಕ್ಕೂ ಹೆಚ್ಚು ವಿವಿಧ ಜಾತಿಯ 12 ಲಕ್ಷ ಹೂಗಳಿಂದ ನಿರ್ಮಾಣವಾಗಿದ್ದ ಸಂಸತ್ ಭವನ ಹಾಗೂ ಅನುಭವ ಮಂಟಪ ಪ್ರಮುಖ ಆಕರ್ಷಣೆಯಾಗಿದ್ದವು. ಸೋಮವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಫಲಪುಷ್ಪ ಪ್ರದರ್ಶನದಲ್ಲಿ ಅತ್ಯುತ್ತಮ ಉದ್ಯಾನ ವಿನ್ಯಾಸಗೊಳಿಸಿದ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸಂಗೀತ, ಸಾಹಿತ್ಯ, ಕಲೆ, ಕೃಷಿ, ಹೈನುಗಾರಿಗೆ, ಕ್ರೀಡೆ, ಮಹಿಳೆಯರ ಕೊಡುಗೆಗಳು, ಜನರ ಜೀವನ ಕ್ರಮ ಹಾಗೂ ಮೌಲ್ಯಗಳು ಅಭಿವ್ಯಕ್ತಿಯಾದ ಈ ಬಾರಿಯ ದಸರಾವು ಸಾಂಸ್ಕೃತಿಕ ಚಳವಳಿಯಾಗಿ ಜರುಗಿದೆ ಎಂದರು.
ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ದೂರಿ ದಸರಾ ಆಚರಿಸುವಂತೆ ತಿಳಿಸಿದ್ದರು. ಅದರಂತೆ ಜನರಲ್ಲಿ ಸಹೋದರತೆ, ಸೌಹಾರ್ದತೆ, ಘನತೆಯ ಬದುಕನ್ನು ಬಿತ್ತುವಂತೆ ಈ ಬಾರಿಯ ದಸರಾವನ್ನು ಆಚರಿಸಲಾಗಿದೆ. ಧರ್ಮ, ಜಾತಿಗೂ ಮೀರಿದ ಸಮಾಜವನ್ನು ನಿರ್ಮಿಸುವ ಸಂದೇಶ ಸಾರಲಾಗಿದೆ ಎಂದರು.
ಈ ಬಾರಿಯ ದಸರಾ ವಿಭಿನ್ನವಾಗಿತ್ತು ಎಂಬ ಉತ್ತಮ ಅಭಿಪ್ರಾಯ ಜನರಿಂದ ಕೇಳಿಬಂದಿದೆ. ಜನರು ಕೂಡ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಜನರ ದಸರಾವಾಗಿ ಪರಿಣಮಿಸಿದೆ. ದಸರಾ ಯಶಸ್ಸಿಗೆ ಮೈಸೂರಿನ ಎಲ್ಲ ಜನತೆ ಕಾರಣೀಭೂತರಾಗಿದ್ದಾರೆ. ಈ ಯಶಸ್ವಿ ದಸರಾ ಆಚರಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸಾಂಸ್ಕೃತಿಕ ಕಿರೀಟ ಇಟ್ಟಂತಾಗಿದೆ ಎಂದರು.
ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ವಿವಿಧ ಪುಷ್ಪಗಳು ಹಾಗೂ ಸಿರಿಧಾನ್ಯಗಳಿಂದ ಬಗೆಬಗೆಯ ಕಲಾ ಪ್ರಕಾರಗಳನ್ನು ರಚಿಸಿ ಜನರ ಮೆಚ್ಚುಗೆ ಗಳಿಸಲಾಗಿದೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಸಂತೋಷದ ವಿಚಾರ ಎಂದರು.
ಗಾಜಿನಮನೆಯಲ್ಲಿ ಸಿದ್ಧಪಡಿಸಿರುವ ಪ್ರಜಾಪ್ರಭುತ್ವ ನಡೆದು ಬಂದ ದಾರಿ ಎಂಬ ಪರಿಕಲ್ಪನೆಯ ವಿನ್ಯಾಸವು 6ನೇ ಶತಮಾನದಿಂದ ಇಲ್ಲಿವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿತ್ತು ಎಂಬುದನ್ನು ಹೇಳುತ್ತದೆ. ಬುದ್ಧರ ಕಾಲ, ಅನುಭವ ಮಂಟಪ, ಸ್ವಾತಂತ್ರ್ಯ ಚಳವಳಿ, ಸಂವಿಧಾನ, ಸಂಸತ್ ಭವನ ಎಲ್ಲವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಮೂಲಕ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಎಂದು ಪ್ರಶಂಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕಿ ಅಬೀಬಾ ನಿಶಾದ್ ಇತರರು ಇದ್ದರು.