ಮಾಲಾದೇವಿ 
ನ್ಯೂಸ್

ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ

ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 50ನೇ ವರ್ಷದ ಹಾಗೂ ಭಗವತಿ ದೇವಾಲಯದ 24ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸೋಮವಾರ ರಾತ್ರಿ ನೆರೆವೇರಿತು.

ಮುತ್ತಪ್ಪನ್ ತೆರೆ ಮಹೋತ್ಸವವನ್ನು ಸಾವಿರಾರು ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದು ಪುನೀತರಾದರು. ಐದು ದಿನಗಳ ವರೆಗೆ ನಡೆದ ವಾರ್ಷಿಕೋತ್ಸವದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ದುರ್ಗಾ ಪೂಜೆ, ಆಶ್ಲೇಷಾ ಬಲಿ, ನಾಗಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳೊಂದಿಗೆ ಸಂಭ್ರಮದಿಂದ ನಡೆಯಿತು.

ಈ ಬಾರಿ ಭಕ್ತರ ಹರಕೆಯ ನಾಲ್ಕು ವಸೂರಿ ಮಾಲ ಕೋಲವು ಕೊಡಗಿನ ಪುಣ್ಯನದಿ ಕಾವೇರಿಯಿಂದ ಹೊರಟು ಪಟ್ಟಣ ಪ್ರವೇಶಿಸದಂತೆ ಸಾವಿರಾರು ಭಕ್ತರು ನಡುರಾತ್ರಿಯಲ್ಲಿ ಬರಮಾಡಿಕೊಂಡರು.

ವಷರ್ಂಪ್ರತಿ ನಡೆಯುವ ಮುತ್ತಪ್ಪನ, ತಿರುವಪ್ಪ, ಶಾಸ್ತಪ್ಪ, ಗುಳಿಗ, ಭಗವತಿ, ವಿಷ್ಣುಮೂರ್ತಿ ಹಾಗೂ ವಸೂರಿ ಮಾಲ ತೆರೆಯನ್ನು ಭಕ್ತರು ಕಣ್ತುಂಬಿಕೊಂಡರು.

ವಾರ್ಷಿಕೋತ್ಸವದ ಪ್ರಯುಕ್ತ ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.

ಐದು ದಿನಗಳ ವಾರ್ಷಿಕ ಮಹೋತ್ಸವದ ಪ್ರಯುಕ್ತ ದೇವಸ್ಥಾನ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ನಡೆಯಿತು.