ನ್ಯೂಸ್

ಗುಣಮಟ್ಟದ ಶಿಕ್ಷಣ ಪಡೆಯಲು ಮುಕ್ತ ವಿವಿ ಸಹಕಾರಿ: ಇಗ್ನೋ 33ನೇ ಘಟಿಕೋತ್ಸವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಭಿಮತ

Mandara

ಬೆಂಗಳೂರು: ಮುಕ್ತ ವಿಶ್ವವಿದ್ಯಾಲಯಗಳು ಎಲ್ಲ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗುತ್ತಿದ್ದು, ಇದನ್ನು ಇನ್ನಷ್ಟು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹೇಳಿದ್ದಾರೆ.

ಪುರಭವನದಲ್ಲಿ ಆಯೋಜಿಸ ಲಾಗಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ (ಇಗ್ನೋ) 33ನೇ ಘಟಿಕೋತ್ಸವ ಉದ್ಘಾಟಿಸಿ ಈ ಕುರಿತು ಮಾತನಾಡಿದರು.

ಎಲ್ಲ ವರ್ಗದ ಜನರಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತಿ ಸಾಧಿಸಲು ಮುಕ್ತ ವಿವಿಗಳು ಸಹಕಾರಿಯಾಗಿವೆ. ಸದ್ಯ ಮುಕ್ತ ವಿವಿಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ದೇಶದ ಬೆಳವಣಿಗೆ ದೃಷ್ಟಿಯಿಂದ ಉತ್ತಮವಾಗಿದೆ ಎಂದರು.

ಪ್ರಾಚೀನ ಕಾಲದಲ್ಲಿ ತಕ್ಷಶಿಲಾ, ನಳಂದಾ, ವಿಕ್ರಮಶೀಲಾ ವಿಶ್ವವಿದ್ಯಾಲಯಗಳು ಜಗತ್ತಿನಾದ್ಯಂತ ಬಹಳ ಪ್ರಸಿದ್ಧಿ ಪಡೆದಿತ್ತು. ನಮಗೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ದೇಶದಲ್ಲಿ 20 ವಿವಿ ಹಾಗೂ 500 ಕಾಲೇಜುಗಳಿದ್ದು, 2.3 ಲಕ್ಷ ವಿದ್ಯಾರ್ಥಿಗಳಿದ್ದರು. ಸದ್ಯ 993 ವಿವಿಗಳಿದ್ದು, 3.74 ಕೋಟಿ ವಿದ್ಯಾರ್ಥಿಗಳಿದ್ದಾರೆ. 2018-19ರಲ್ಲಿ ಸರ್ವೆ ಪ್ರಕಾರ ನಮ್ಮ ರಾಜ್ಯವು ದೇಶದಲ್ಲಿ ಹೆಚ್ಚು ಕಾಲೇಜುಗಳನ್ನು ಹೊಂದಿದ 8ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಭವಿಷ್ಯ ಕಟ್ಟಿಕೊಳ್ಳಲು ನೆರವು: ಘಟಿಕೋತ್ಸವದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ತಮ್ಮ ಕುಟುಂಬ ಸದಸ್ಯರು ನೀಡಿದ ಬೆಂಬಲವನ್ನು ಮರೆಯಬಾರದು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಪದವೀಧರರ ಪಾತ್ರ ಮಹತ್ವವಾಗಿದೆ. ಸದ್ಯದ ಕಾಲಘಟ್ಟದಲ್ಲಿ ಮುಕ್ತ ವಿವಿ ಪರಿಕಲ್ಪನೆಯು ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ಹೆಚ್ಚು ಗಮನ ಸೆಳೆಯುತ್ತಿವೆ. ಇಗ್ನೋ ವಿವಿ ಸಾಧನೆಗಳು ಪ್ರಶಂಸನೀಯ. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಎಂದರು.

ಸಮಾರಂಭದಲ್ಲಿ ಇಗ್ನೋ ವಿವಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ನಿರ್ದೇಶಕ ಜಿ.ಎಚ್. ಇಮ್ರಾಪುರ, ಇಗ್ನೋ ವಿವಿ ವಿಜಯಪುರ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ.ಎ. ವರದರಾಜನ್ ಮತ್ತಿತರರು ಉಪಸ್ಥಿತರಿದ್ದರು.

ಚಿನ್ನದ ಪದಕ ಕೊರಳಿಗೇರಿಸಿದವರು: ರಿಬಾ ಮಾರಿಯಾ ಕುರಿಯನ್ (ಎಂ.ಎ. ಸೈಕಾಲಜಿ), ಸಿ.ಆರ್. ಶಿಲ್ಪಾ (ಬಿ.ಇಡ್), ವರ್ಸೆಲಿನ್ ತೆಲಾಸ್ ಮೇರಿ ಎ (ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್), ರಿಚು ಹ್ಯಾರಿಸ್ (ಡಿಪ್ಲೊಮಾ ಇನ್ ಅರ್ಲಿ ಚೈಲ್ಡು್ಹಡ್ ಕೇರ್ ಆಂಡ್ ಎಜುಕೇಶನ್ ), ಮಾನಸಾ ಪರಮೇಶ್ವರ ಹೆಗ್ಡೆ (ನ್ಯೂಟ್ರಿಷನ್ ಮತ್ತು ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೊಮಾ) ಅವರಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಬೆಂಗಳೂರಿನ 4,028 ಮತ್ತು ವಿಜಯಪುರದ 859 ಮಂದಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.