ನ್ಯೂಸ್

ಕಾಂಗ್ರೆಸ್ ಪಕ್ಷ ಸೇರಲು ಓಪನ್ ಆಫರ್: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಬರುವವರಿಗೆ ಕಾಂಗ್ರೆಸ್ ಪಕ್ಷ ಸೇರಲು ಓಪನ್ ಆಫರ್ ಇದೆ. ಬಾಂಬೆ ಫ್ರೆಂಡ್ಸ್ ಅಥವಾ ದೆಹಲಿ ಫ್ರೆಂಡ್ಸ್ ಯಾರಾದರೂ ಆಗಿರಲಿ. ಸಮಾನ ಮನಸ್ಕರು, ಸಂವಿಧಾನ ರಕ್ಷಣೆ ಬಯಸುವ ಎಲ್ಲರನ್ನು ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಕ್ತ ಆಹ್ವಾನ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಜತೆಗೆ ಇನ್ನೂ ಯಾರ‌್ಯಾರು ಪಕ್ಷ ಸೇರಲು ಸಿದ್ಧರಿದ್ದಾರೋ ಅವರನ್ನು ಸ್ವಾಗತಿಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಂತ್ರ, ಪ್ರತಿತಂತ್ರ ಸಹಜ

ಚುನಾವಣೆ ಎಂದ ಮೇಲೆ ರಾಜಕೀಯ ಪಕ್ಷಗಳು ತಂತ್ರ, ಪ್ರತಿ ತಂತ್ರ ಹೆಣೆಯುವುದು ಸಹಜ. ರಾಜ್ಯಸಭೆ ಚುನಾವಣೆಗೆ‌ ಜೆಡಿಎಸ್- ಬಿಜೆಪಿ ಜಂಟಿ ತಂತ್ರ ಹೂಡಿದ್ದರೆ, ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ‌ ರೂಪಿಸಿಕೊಳ್ಳಲಿದ್ದು, ಫೆ.27ರಂದು ಎಲ್ಲವೂ ಗೊತ್ತಾಗಲಿದೆ ಎಂದರು.

ಸಾಕಷ್ಟು ಸಂಖ್ಯಾಬಲ ಇಲ್ಲವೆಂದು ಗೊತ್ತಿದ್ದರೂ ಕುಪೇಂದ್ರರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ತನ್ನ ಶಾಸಕರ ಒಗ್ಗಟ್ಟು ಪರೀಕ್ಷಿಸಿಕೊಳ್ಳಲು ಈ ಪ್ರಯತ್ನ ಮಾಡಿದೆ. ಶಾಸಕರಿಗೆ ಆಮಿಷವೊಡ್ಡಿದ್ದರ ಬಗ್ಗೆ ಈಗಾಗಲೇ ದೂರು ಸಲ್ಲಿಕೆಯಾಗಿದೆ. ಪಕ್ಷದ ಶಾಸಕರನ್ನು ಬೇರೆಡೆ ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.