ನ್ಯೂಸ್

ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಪುನರುಚ್ಚಾರ

ಬೆಂಗಳೂರು: ಆದಾಯ ತೆರಿಗೆ ಪಾವತಿಸುತ್ತಿರುವವರು, ಉಳ್ಳವರು ಸೇರಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಮಾತ್ರ ರದ್ದು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪುನರುಚ್ಚರಿಸಿದರು.

ದಾಸಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು ರಾಜ್ಯದ ಜನತೆಗೆ ಕನಕ ಜಯಂತಿಯ ಶುಭಾಶಯಗಳನ್ನು ಕೋರಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಅರ್ಹರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿಲ್ಲ. ಬಡವರಿಗೆ ಕೊಡಬೇಕು, ಕೊಡುತ್ತಿದ್ದೇವೆ. ಎಪಿಎಲ್ ಕಾರ್ಡ್ ವಿಚಾರದಲ್ಲೂ ಅಷ್ಟೇ ಕೆವೈಸಿ ಪೂರ್ಣಗೊಳ್ಳದವು ಮಾತ್ರ ರದ್ದಾಗುತ್ತಿವೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳ ಮೇಲೆ ಗರಂ

ಬಿಪಿಎಲ್,  ಎಪಿಎಲ್ ಕಾರ್ಡ್ ರದ್ದು, ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಗೆ ಪರಿವರ್ತನೆ ಎಂದು ನೀವೇ (ಮಾಧ್ಯಮದವರು) ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು. ಬಡವರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ ಎಂದರು.

ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ, ಜೆಡಿಎಸ್ ನವರು ಕೊಟ್ಟಿದ್ದಾರಾ ?. 2017ರಲ್ಲಿ ಒಂದು ರೂಪಾಯಿಗೆ ಕೆಜಿ ಅಕ್ಕಿ ಕೊಟ್ಟೆವು. ಅವರು ಅಧಿಕಾರದಲ್ಲಿರುವಾಗ ಕೊಡಲು ಸಾಧ್ಯವಾಯಿತೆ ?. ಮಧ್ಯಪ್ರದೇಶ, ಬಿಹಾರ್, ಗುಜರಾತ್, ಹರಿಯಾಣ ರಾಜ್ಯಗಳಲ್ಲಿ ಜಾರಿ ಮಾಡಿದ್ದಾರೆಯೆ ? ಎಂದು ಏರು ಧ್ವನಿಯಲ್ಲಿ ಕೇಳಿದರು.

ಎಚ್ ಡಿಕೆ, ಕೇಂದ್ರದ ಮೇಲೆ ವಾಗ್ದಾಳಿ

ಜನರು ಪಾವತಿಸುತ್ತಿರುವ ತೆರಿಗೆ ದುಡ್ಡು ಎಲ್ಲಿಗೆ ಹೋಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪ್ರಶ್ನಿಸಲು ಯಾವ ನೈತಿಕತೆಯಿದೆ ?. ರಾಜ್ಯದಿಂದ ನಾಲ್ಕುವರೆ ಲಕ್ಷ ಕೋಟಿ ರೂ ಆದಾಯ ಕೇಂದ್ರಕ್ಕೆ ಸಂದಾಯವಾಗುತ್ತಿದೆ. ಆದರೆ, ವಾಪಸ್ ಹಂಚಿಕೆಯಾಗುತ್ತಿರುವುದು 60 ಸಾವಿರ ಕೋಟಿ ರೂ.ಗಳು. ಉಳಿದ ದುಡ್ಡನ್ನು ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕೊಡಿಸಲಿ ಎಂದು ತಿರುಗೇಟು ನೀಡಿದರು.

ನಬಾರ್ಡ್ ನೆರವು ನೀಡುವುದರಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಒಟ್ಟು ಮೊತ್ತದಲ್ಲಿ ಶೇಕಡ 58ರಷ್ಟು ಕಡಿಮೆ ಸಾಲ ಕೊಟ್ಟಿದ್ದಾರೆ. ಕಳೆದ ವರ್ಷ 5,600 ಕೋಟಿ ರೂ ನೀಡಿದರೆ ಈ ವರ್ಷ 2,300 ಕೋಟಿ ರೂ ನೀಡಿದ್ದಾರೆ.

ಇದರಿಂದಾಗಿ ಸಹಕಾರ ಸಂಘ-ಸಂಸ್ಥೆಗಳ ಮೂಲಕ ರೈತರಿಗೆ ಕೃಷಿ ಸಾಲ ಕೊಡುವುದಕ್ಕೆ ಕಷ್ಟವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಅನ್ಯಾಯ, ರೈತರಿಗೆ ದ್ರೋಹ ಮಾಡಬೇಡಿ ಎಂದು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ದಾವೆ ಹೂಡಲು ಚಿಂತನೆ

ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಅಲ್ಲಿನ ಸರ್ಕಾರ, ಬಿಜೆಪಿಯವರು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ದಾವೆ ಹೂಡಲು ಚಿಂತನೆ ನಡೆಸಿದ್ದು, ಈ ಬಗ್ಗೆ ಕಾನೂನು ತಜ್ಞರ ಜತೆಗೆ ಚರ್ಚೆ ನಡೆದಿದೆ. ಬಿಜೆಪಿಯವರ ವಿರುದ್ಧವೂ ಪ್ರತ್ಯೇಕ ಸೂಟ್ ದಾಖಲಿಸಲು ಯೋಚನೆ ಮಾಡುತ್ತಿದ್ದೇವೆ ಎಂದರು‌.

ಅಹಿಂದ ಸಮಾವೇಶ ಆಯೋಜನೆಗೆ ಸಿದ್ಧತೆ‌ ನಡೆದಿದೆಯೆ ? ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಮೊದಲು ನಾನು ಈವರೆಗೆ ಹೇಳಿದ್ದನ್ನು ತೋರಿಸಿ ಎನ್ನುತ್ತಾ ಹೊರಟರು.

ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.