ನ್ಯೂಸ್

ಸಿಎಎ ವಿರೋಧಿಸಿ ಬಿಜೆಪಿ ತೊರೆದ ಪ್ರಭಾವಿ ನಾಯಕ: ಗಂಭೀರ ಸಮಸ್ಯೆ ಮರೆತು ಕೋಮು ರಾಜಕೀಯದಲ್ಲಿ ಪಕ್ಷ ಮುಳುಗಿದೆ ಎಂಬ ಆರೋಪ

ಭೋಪಾಲ್​: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ತಮ್ಮ ಕೌನ್ಸಿಲರ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಪಕ್ಷವನ್ನೇ ತೊರೆದಿದ್ದಾರೆ.

ಬಿಜೆಪಿ ನಾಯಕ ಉಸ್ಮಾನ್​ ಪಟೇಲ್​ ಪಕ್ಷ ತೊರೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಕೋಮು ರಾಜಕೀಯ ಮಾತ್ರ ಮಾಡುತ್ತಿದೆ. ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳ ಬಗ್ಗೆ ನಿರ್ಲಕ್ಷಿಸಿ, ಎಲ್ಲ ಧರ್ಮದ ಜನರ ನಡುವೆ ಕಂದಕಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಸುಮಾರು 40 ವರ್ಷಗಳಿಂದ ನಾನು ಬಿಜೆಪಿಯಲ್ಲಿ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ. ಸಿಎಎಯಿಂದ ಉಂಟಾಗಿರುವ ಕಿಡಿಯಿಂದಾಗಿ ನಾನು ರಾಜೀನಾಮೆ ನೀಡಿದ್ದೇನೆ. ವಸುದೈವ ಕುಟುಂಬಕಂ ಎಂದು ತನ್ನ ಸಿದ್ಧಾಂತದ ವಿರುದ್ಧವೇ ಬಿಜೆಪಿ ಹೋಗುತ್ತಿದೆ ಎಂದು ಉಸ್ಮಾನ್​ ಪಟೇಲ್​ ಟೀಕಿಸಿದ್ದಾರೆ.

ನಿಜವಾದ ಸಮಸ್ಯೆಗಳಿಂದ ಬಿಜೆಪಿ ಬಹುದೂರ ಸಾಗಿದೆ. ಅದನ್ನು ಬಿಟ್ಟು ಕೇವಲ ಕೋಮು ರಾಜಕೀಯ ಮಾಡಿಕೊಂಡು ನಿಂತಿದೆ. ಜಿಡಿಪಿ ಕುಸಿಯುತ್ತಿದೆ. ಹಣದುಬ್ಬರ ಹೆಚ್ಚುತ್ತಿದೆ. ಆದರೆ, ಪಕ್ಷ ಮಾತ್ರ ಕಾನೂನುಗಳನ್ನು ಜಾರಿಗೆ ತಂದು ಧರ್ಮದ ನಡುವೆ ಕಂದಕ ಸೃಷ್ಟಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಉಸ್ಮಾನ್​ ಪಟೇಲ್​ ಬಿಜೆಪಿ ನಾಯಕರ ನಡುವೆ ಸಿಎಎ ಅನ್ನು ವಿರೋಧಿಸಿದ ಮೊದಲ ನಾಯಕರೆನಿಸಿಕೊಂಡಿದ್ದಾರೆ. ಸಿಎಎ ವಿಚಾರವಾಗಿಯೇ ಕಳೆದ 80 ಮುಸ್ಲಿಂ ಬಿಜೆಪಿ ನಾಯಕರು ತಮ್ಮ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿದ್ದಾರೆ.

ಉಸ್ಮಾನ್​ ಪಟೇಲ್​ ಅವರು ಇಂದೋರ್​ ಬಿಜೆಪಿ ಅಧ್ಯಕ್ಷ ಗೋಪಿ ಕೃಷ್ಣ ನೇಮಾ ಅವರಿಗೆ ರಾಜೀನಾಮೆ ಪತ್ರವನ್ನು ವಾಟ್ಸ್​ಆ್ಯಪ್​ ಮೂಲಕ ರವಾನಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದರೆ, ಉಸ್ಮಾನ್​ ಪಟೇಲ್​ ಬಿಜೆಪಿ ಅಧಿಕೃತವಾಗಿ ತೊರೆದಂತಾಗುತ್ತದೆ. (ಏಜೆನ್ಸೀಸ್​)