ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ 210 ಕೆರೆಗಳಲ್ಲಿ 21 ಕೆರೆಗಳು ಅತ್ಯುತ್ತಮ ನೀರಿನ ಗುಣಮಟ್ಟವನ್ನು ಹೊಂದಿದ್ದು, ಕುಡಿಯುವ ಉದ್ದೇಶಕ್ಕೆ ಬಳಸಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್ಇಇಆರ್ಐ) ಅಧ್ಯಯನ ನಡೆಸಿದ್ದು, 21 ಕೆರೆಗಳಲ್ಲಿ ಅಂದರೆ ಒಟ್ಟು 210 ಕೆರೆಗಳಲ್ಲಿ ಶೇ. 10 ರಷ್ಟು ಕೆರೆಗಳ ನೀರಿನ ಗುಣಮಟ್ಟ ಅತ್ಯುತ್ತಮವಾಗಿದೆ.
ಮೊದಲ ಹಂತದ ವರದಿಯಲ್ಲಿರುವಂತೆ ಎನ್ಇಇಆರ್ಐ, ಕೇವಲ ಕೆರೆಯ ಸ್ಥಾನಮಾನವನ್ನು ಮಾತ್ರ ಅಧ್ಯಯನ ಮಾಡಿಲ್ಲ. ಬದಲಾಗಿ ಕೆರೆಗಳ ಪುನರುಜ್ಜೀವನದ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಸೂಚಿಸಿದೆ. ಎನ್ಇಇಆರ್ಐ ತನ್ನ ಅಧ್ಯಯನದ ವರದಿಯನ್ನು ವಿಭಾಗೀಯ ಪೀಠದ ಮುಖ್ಯನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಾಧೀಶ ಸಚಿನ್ ಶಂಕರ್ ಅವರಿಗೆ ಸಲ್ಲಿಸಿದೆ.
ಕೆರೆಗಳ ಕುರಿತಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೆರೆಗಳ ಅಧ್ಯಯನಕ್ಕಾಗಿ ಸಿಎಸ್ಐಆರ್ ಮತ್ತು ಎನ್ಇಇಆರ್ಐ ಅನ್ನು ನೇಮಕ ಮಾಡಿತ್ತು. ಅದರಂತೆಯೇ ಸಂಶೋಧನೆ ನಡೆಸಿ ಎರಡು ಸಂಸ್ಥೆಗಳು ವರದಿಯನ್ನು ಸಲ್ಲಿಸಿವೆ.
ಒಟ್ಟು 210 ಕೆರೆಗಳಲ್ಲಿ 36 ಕೆರೆಗಳ ನೀರು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿದ್ದು, ಯಾವುದೇ ಉದ್ದೇಶಕ್ಕಾಗಲಿ ಬಳಸಲು ಯೋಗ್ಯವಿಲ್ಲ. 63 ಕೆರೆಗಳ ನೀರನ್ನು ಕೆಲವು ನಿರ್ಬಂಧಗಳೊಂದಿಗೆ ನೀರಾವರಿಗಾಗಿ ಬಳಸಬಹುದಾಗಿದೆ. ಇನ್ನು ಕೆಲವೊಂದು ಕೆರೆಗಳಲ್ಲಿ ಕಳೆಗಳು ಮತ್ತು ಕೆಲವು ಒಣಗಿರುವುದರಿಂದ ನೀರಿನ ಸ್ಯಾಂಪಲ್ ಅನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ.
ಅಧ್ಯಯನ ಮುಖ್ಯ ಉದ್ದೇಶವೆಂದರೆ, ಕೆರೆಗಳ ಮಾಲಿನ್ಯದ ಕಾರಣಗಳು, ಅವುಗಳ ರಕ್ಷಣೆಗಾಗಿ ಅಲ್ಪಾವಧಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಸೂಚಿಸುವುದು, ಸಮಯ ಕಳೆದಂತೆ ಕಣ್ಮರೆಯಾದ ಕೆರೆಗಳ ಸ್ಥಳವನ್ನು ಕಂಡುಹಿಡಿಯುವುದು ಮತ್ತು ಪುನರುಜ್ಜೀವನಗೊಳಿಸುವುದು ಮತ್ತು ಅಸ್ತಿತ್ವದಲ್ಲಿದ್ದ ಕೆರೆಗಳ ಮರುಸ್ಥಾಪನೆಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುವುದು ಆಗಿದೆ.
ಕೆರೆಗಳ ಒಳಹರಿವು ಹೆಚ್ಚಾಗಿ ಚಂಡಮಾರುತದ ನೀರಿನೊಂದಿಗೆ ಕೊಳಚೆನೀರನ್ನು ಒಯ್ಯುವುದರಿಂದ ನಗರಗಳಲ್ಲಿ ಡ್ರೈನ್ ವಾಟರ್ ಸಂಸ್ಕರಣೆಗೆ ತಂತ್ರಜ್ಞಾನಗಳನ್ನು ಅಳವಡಿಸಿ, ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಬಿಡಬಹುದು ಎಂದು ಎನ್ಇಇಆರ್ಐ ತಿಳಿಸಿದೆ. ಅಲ್ಲದೆ, ಕೆರೆಗಳ ಸಂಸ್ಕರಣೆಗೆ ಅಳವಡಿಸಬಹುದಾದ ಎನ್ಇಇಆರ್ಐನ ಎರಡು ತಂತ್ರಜ್ಞಾನಗಳಾದ ಕೆರೆಗಳ ಸಿತು ಡ್ರೈನ್ ಟ್ರೀಟ್ಮೆಂಟ್ (ಆರ್ಇಎನ್ಇಯು) ಮತ್ತು ಫೈಟೊರಿಡ್ (ಗದ್ದೆ ವ್ಯವಸ್ಥೆ ಆಧಾರಿತ ಒಳಚರಂಡಿ ಸಂಸ್ಕರಣೆ) ವ್ಯವಸ್ಥೆಯನ್ನು ಎನ್ಇಇಆರ್ಐ ಪ್ರಸ್ತಾಪಿಸಿದೆ. (ಏಜೆನ್ಸೀಸ್)