ಬೆಂಗಳೂರು: ಮಹಾನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ 1 ಬಟ್ಟೆ ಬ್ಯಾನರ್‌ಗೆ ಮಾತ್ರ ಅವಕಾಶ. ಮೆರವಣಿಗೆ ಮಾರ್ಗ ಮತ್ತು ಮೂರ್ತಿಗಳ ವಿಸರ್ಜನೆ ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ವರ್ಷ ಪಾಲನೆಯಾದ ನಿಯಮಗಳೇ ಈ ವರ್ಷವೂ ಜಾರಿಯಲ್ಲಿ ಇರಲಿವೆ.
ಗಣೇಶ ಉತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಿಬಿಎಂಪಿ ಮತ್ತು ನಗರ ಪೊಲೀಸರು ಪುರಭವನದಲ್ಲಿ ಗುರುವಾರ ಶಾಂತಿ ಸೌಹಾರ್ದ ಸಭೆ ನಡೆಸಿದರು. ಗಣೇಶ ಉತ್ಸವ ಮಂಡಳಿ ಮುಖ್ಯಸ್ಥರು, ಮುಸ್ಲಿಂ, ಕ್ರೈಸ್ತ ಧರ್ಮದ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಪೊಲೀಸ್ ಆಯುಕ್ತ ಬಿ. ದಯಾನಂದ್ ಮತ್ತು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಸಾರ್ವಜನಿಕರಿಂದ ಸಮಸ್ಯೆ ಮತ್ತು ಸಲಹೆಗಳನ್ನು ಆಲಿಸಿ ಕೆಲ ಸೂಚನೆಗಳನ್ನು ನೀಡಿದರು.
ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಒಂದೇ ಸೂರಿನಡಿ ಅನುಮತಿ ಪತ್ರ ಪಡೆಯಬಹುದು. ಅರ್ಜಿ ಸಲ್ಲಿಸಿದ 48 ಗಂಟೆ ಒಳಗಾಗಿ ಅನುಮತಿ ಸಿಗಲಿಲ್ಲ ಎಂದರೆ ಅದು ರದ್ದಾಗಿದೆ ಎಂದು ತಿಳಿಯಬೇಕೆಂದು ತುಷಾರ್ ಗಿರಿನಾಥ್ ತಿಳಿಸಿದರು.
ಹೈಕೋರ್ಟ್ ಆದೇಶ ಇರುವ ಕಾರಣ ಬ್ಯಾನರ್, ್ಲೆಕ್ಸ್ ಅಳವಡಿಕೆಗೆ ಅವಕಾಶ ಇಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಯಾವುದೇ ಒಂದು ಸ್ಥಳದಲ್ಲಿ 1 ಬಟ್ಟೆ ಬ್ಯಾನರ್ ಅಳವಡಿಸಿಕೊಳ್ಳಬಹುದು. ಗಣೇಶ್ ಉತ್ಸವಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಮೊದಲ ಬಾರಿಗೆ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ಪಿಒಪಿ ಮೂರ್ತಿ ಖರೀದಿಸಬೇಡಿ:
ಹಬ್ಬಕ್ಕೂ ಮೊದಲೇ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಕೆರೆಗಳ ಬಳಿ ಕೌಂಟರ್ ತೆರೆಯಲಿದ್ದು, ಅಗತ್ಯ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಇಂತಹ ಮೂರ್ತಿಗಳನ್ನು ಖರೀದಿಸಬೇಡಿ. ಪರಿಸರಸ್ನೇಹಿ ಮೂರ್ತಿಗಳನ್ನು ಕೂರಿಸಿ ತಮ್ಮ ಸುತ್ತಮುತ್ತಲಿನ ಜನರಿಗೂ ಅರಿವು ಮೂಡಿಸಿ, ವಿಸರ್ಜನಾ ಸ್ಥಳದಲ್ಲಿ ತ್ಯಾಜ್ಯವನ್ನು ಒಂದು ಕಡೆ ಹಾಕಿದರೆ ಸ್ವಚ್ಛತೆಗೆ ಅನುಕೂಲವಾಗಲಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಮತ್ತು ಇತರೆ ಕೆರೆ/ಕಲ್ಯಾಣಿಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೊಸದಾಗಿ ಕಲ್ಯಾಣಿ ವ್ಯವಸ್ಥೆ ಮಾಡುವುದಿಲ್ಲ. ಅಗತ್ಯ ಇರುವ ವಾರ್ಡ್‌ಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಇರಲಿದೆ. ಕಲ್ಯಾಣಿಗಳ ಬಳಿ ಭದ್ರತೆ ದೃಷ್ಟಿಯಿಂದ ಪೊಲೀಸರು, ಸಿಸಿ ಕ್ಯಾಮರಾ, ವಿದ್ಯುತ್‌ದೀಪ, ನುರಿತ ಈಜುಗಾರರು, ಕ್ರೇನ್, ಆಂಬುಲೆನ್ಸ್ ಸೌಲಭ್ಯ ಇರಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್, ರಮಣ ಗುಪ್ತಾ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರಿಗಳ ಸೂಚನೆ ಪಾಲಿಸಿ
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಪೊಲೀಸರು, ಬೆಸ್ಕಾಂ, ಪಾಲಿಕೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚನೆ ನೀಡಿದರು.