ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ ಆರಂಭ ಮಾಡಲಾಗುವುದು ಎಂದು ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸೇವೆ ಮಾಡಿಸಬಯಸುವವರು ಆನ್‌ಲೈನ್‌ನಲ್ಲೇ ಹಣ ಕಳಿಸಿ ಪೂಜೆ ಮತ್ತು ಅರ್ಚನೆ ಮಾಡಿಸಬಹುದು. ಹೂವಿನ ಅಲಂಕಾರ, ಅಭಿಷೇಕ, ಮಂಗಳಾರತಿ ಸೇರಿ 23 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ ಇರುತ್ತವೆ ಎಂದು ಹೇಳಿದರು.
ಭಕ್ತರಿಗೆ ಪ್ರಸಾದವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯೇಶ್ವರ, ಕೊಲ್ಲೂರು ಮೂಕಾಂಬಿಕೆ, ಚಾಮುಂಡೇಶ್ವರಿ, ಬೆಂಗಳೂರಿನ ಬನಶಂಕರಿ, ಸವದತ್ತಿ ಯಲ್ಲಮ್ಮ ಸೇರಿದಂತೆ 50 ದೇವಸ್ಥಾನಗಳಲ್ಲಿ ಪೂಜೆ ಆರಂಭಿಸಲಾಗುವುದು ಎಂದು ವಿವರಿಸಿದರು.
ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸುವ ಬಗ್ಗೆ ಮತ್ತೊಮ್ಮೆ ತಜ್ಞರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಲಾಕ್‌ಡೌನ್ ಮುಗಿಯುವ ವರೆಗೂ ಸಾಮೂಹಿಕ ವಿವಾಹ ಆಯೋಜಿಸುವ ಸಾಧ್ಯತೆ ಇಲ್ಲ ಎಂದು ಹೇಳಿದರು.