ನ್ಯೂಸ್

ಆನ್​ಲೈನ್ ಗೇಮ್ ಗೀಳು ಇಡೀ ಕುಟುಂಬಕ್ಕೆ ಗೋಳು

‘ಯಾರಿಗೆ ಹೇಳಲಿ ನನ್ನ ಸಮಸ್ಯೆ. ಮಾನಸಿಕವಾಗಿ, ಆರ್ಥಿಕವಾಗಿ ತುಂಬಾ ನೊಂದು ಹೋಗಿದ್ದೇನೆ. ಏನು ಆಟ ಅಂತಾ ಬಂತು ಮಾರಾಯ್ರೆ ಇದು. ನನ್ನ ಮಗನ ಜೀವನವನ್ನೇ ಹಾಳು ಮಾಡಿಬಿಟ್ಟಿತು ನೋಡಿ... ಪುಣ್ಯ ಈಗಲಾದರೂ ಇದಕ್ಕೆ ಒಂದು ಕಡಿವಾಣ ಅಂತಾ ಹಾಕಿದ್ರಲ್ಲ, ಸಾಕು ಬಿಡಿ. ಅದೆಷ್ಟೋ ಮನೆಗಳ ಬೆಳಕು ಬೆಳಗುತ್ತೆ...’

- ನಿವೃತ್ತ ಅಧಿಕಾರಿಯೊಬ್ಬರು ಆಡಿದ ನೊಂದ ಮಾತುಗಳಿವು. ಅವರ ಮಾತಿನಲ್ಲಿ ಹತಾಶೆಯಿತ್ತು. ಅಸಹಾಯಕತೆ ಇತ್ತು. ಮೇಲಾಗಿ ಏನೋ ಕಳೆದುಕೊಂಡ ಭಾವವಿತ್ತು. ವಿಚಾರಿಸಿದಾಗ ಅವರ ಉತ್ತರ ಕೇಳಿ ಒಂದು ಕ್ಷಣ ನಾನೂ ದಂಗಾದೆ. ಅವರಿಗೆ ಒಬ್ಬನೇ ಮಗ. ಚೆನ್ನಾಗಿ ಓದಿದ್ದಾನೆ. ಕೈ ತುಂಬಾ ಸಂಬಳ, ಆದರೆ ಅದ್ಯಾವ ಗಳಿಗೆಯಲ್ಲಿ ಈ ಆನ್​ಲೈನ್ ಗೇಮಿಂಗ್ ಗೀಳು ಹತ್ತಿತೋ ಗೊತ್ತಿಲ್ಲ. ಇರುವ ಕೆಲಸವನ್ನೂ ಕಳೆದುಕೊಂಡು ದಿನವಿಡೀ ಅದನ್ನೇ ಆಡಿ ಆಡಿ, ಬರೋಬ್ಬರಿ 3 ಕೋಟಿ ರೂ.ಗೂ ಹೆಚ್ಚು ಹಣ ಕಳೆದುಕೊಂಡಿದ್ದ.

ಆ ಗೇಮ್ ಪಾಶಕ್ಕೆ ಸಿಲುಕಿ ಅದನ್ನು ಆಡದೇ ಇರಲಾರೆ ಎನ್ನುವ ಮಟ್ಟಿಗೆ ಆತ ಬಂದಾಗಿತ್ತು. ಸದಾ ಅದರದ್ದೇ ಧ್ಯಾನ. ಇದು ಆತನದಷ್ಟೇ ಅಲ್ಲ ಇಡೀ ಮನೆ ಜನರ ನೆಮ್ಮದಿ ಹಾಳು ಮಾಡಿತ್ತು. ಮಗನದಲ್ಲದೇ ತಂದೆಯ ದುಡಿಮೆಯನ್ನೂ ಕರಗಿಸಿತ್ತು. ಇನ್ನು ಸ್ವಲ್ಪ ದಿನ ಮುಂದುವರಿದಿದ್ದರೆ ಇಡೀ ಕುಟುಂಬವೇ ಬೀದಿಪಾಲಾಗುತ್ತಿತ್ತು. ಅದೇನೋ ಸುದೈವ ಅಷ್ಟಕ್ಕೆ ಒತ್ತಾಯದ ಮೇರೆಗೆ ಆತನ ಗೇಮ್ ಹವ್ಯಾಸಕ್ಕೆ ಕಡಿವಾಣ ಬಿದ್ದಿತು. ಇಂತಹ ಅನೇಕ ಕುಟುಂಬಗಳಿವೆ.

ಹಣ ಪಣಕ್ಕಿಟ್ಟು ಆಡುವ ಆಟಗಳ ಮೋಡಿಗೆ ಒಳಗಾದ ಅನೇಕ ಯುವಕರು ಇದ್ದಬಿದ್ದ ಹಣವನ್ನೂ ಕಳೆದುಕೊಂಡಿದ್ದಾರೆ. ಹಲವು ಕುಟುಂಬಗಳಿಗೆ ನೆಮ್ಮದಿ ಮಾಯವಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ಬೀದಿಗೆ ಬಿದ್ದಿದ್ದ ಸಾವಿರಾರು ಸಂಸಾರಗಳ ರೋದನ ಹೇಳತೀರದು. ಕೆಲ ದಿನಗಳ ಹಿಂದೆಯಷ್ಟೇ ಬೀದರ್​ನ ಯುವಕನೊಬ್ಬ ಹಣ ಕಳೆದುಕೊಂಡು ಹುಚ್ಚನಂತಾಗಿ ಆತ್ಮಹತ್ಯೆಗೆ ಯತ್ನಿಸಿ ಕೊನೆ ಸಾವನ್ನಪ್ಪಿದ್ದನ್ನು ಸ್ಮರಿಸಬಹುದು.ಲಕ್ಷಾಂತರ ರೂಪಾಯಿ ಸಾಲ ಮಾಡಿ ಆನ್​ಲೈನ್​ನಲ್ಲಿ ಕಳೆದುಕೊಂಡಿದ್ದ ಯುವಕನ 10 ಲಕ್ಷ ಸಾಲವನ್ನು ಕುಟುಂಬದವರು ತೀರಿಸಿದ್ದರು.

ಆದರೆ ಮತ್ತೆ ಎರಡು ಲಕ್ಷ ಸಾಲ ಮಾಡಿಕೊಂಡಿದ್ದ, ಈ ಸಾಲದ ವಿಷಯ ಮನೆಯಲ್ಲಿ ಗೊತಾದರೆ ತೊಂದರೆ ಎಂದು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವುದಕ್ಕೂ ಮುನ್ನ ಆತ ‘ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಆನ್​ಲೈನ್ ಗೇಮ್ ಬಂದ್ ಮಾಡಿ’ ಎಂದು ಮನವಿ ಮಾಡಿದ್ದಾನೆ. ರಾಜ್ಯದಲ್ಲಿ ಆನ್​ಲೈನ್ ಗೇಮ್ ಆಡುವವರಿಗೂ ಸಲಹೆ ನೀಡಿದ್ದಾನೆ. ‘ಆನ್​ಲೈನ್ ಗೇಮ್ಲ್ಲಿ ಹಣ ಬರುತ್ತೆ ಬರುತ್ತೆ ಅಂತಾ ಆಸೆ ಇರುತ್ತೆ, ಆದ್ರೆ ಏನೂ ಬರಲ್ಲ. ದಯವಿಟ್ಟು ಯಾರೂ ಆನ್​ಲೈನ್ ಗೇಮ್ ಆಡಬೇಡಿ, ಏಳೆಂಟು ವರ್ಷದ ಅನುಭವ ಇದೆ, ಆಡುವವರಿಗೆ ಲಾಭ ಇಲ್ಲ’ ಎಂದು ಸಲಹೆ ನೀಡಿದ್ದಾನೆ.

ಇಂತಹ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರಕಾರ ಇಂತಹ ಗೇಮ್ಳ ನಿಷೇಧಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಸಾಲದ ಸುಳಿಯಲ್ಲಿ ಸಿಲುಕಿ ಬೀದಿಗೆ ಬಿದ್ದಿದ್ದ ಸಾವಿರಾರು ಸಂಸಾರಗಳ ಮನವಿಗೆ ಅಸ್ತು ಎಂದಿದೆ. ಹಗಲು ರಾತ್ರಿ ಎನ್ನದೆ, ಹಣ ಸುರಿದು, ಕೊನೆಗೆ ಯುವಕರು ಬೀದಿಗೆ ಬೀಳುತ್ತಿದ್ದರು. ಈ ಆನ್​ಲೈನ್ ಗೇಮಿಂಗ್ ಎಂಬ ಮಾಯಾಜಾಲಕ್ಕೆ ಸಿಲುಕಿ ಅನೇಕ ಮನೆಗಳು ನರಕವಾಗಿದ್ದವು. ಈಗ ಮೊಬೈಲ್ ಬೆಟ್ಟಿಂಗ್ ಆಪ್​ಗಳು, ರಿಯಲ್ ಮನಿ ಗೇಮ್ಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಆನ್​ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಮೂಲಕ ಬ್ರೇಕ್ ಹಾಕಿದೆ. ಇಂತಹ ಆಟಗಳ ಎಲ್ಲಾ ರೀತಿಯ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಟಿವಿ, ಡಿಜಿಟಲ್ ಮಾಧ್ಯಮ ಅಥವಾ ಪತ್ರಿಕೆಗಳಲ್ಲಿ ಇನ್ನು ಮುಂದೆ ಆನ್​ಲೈನ್ ಮನಿ ಗೇಮ್ಳ ಪ್ರಚಾರ ಕಾಣಿಸಲ್ಲ ಎನ್ನುವುದು ಸಂತಸದ ಸಂಗತಿ. ಕಾನೂನನ್ನು ಉಲ್ಲಂಘಿಸಿ ಆನ್​ಲೈನ್​ನಲ್ಲಿ ಹಣದ ಆಟ ನಡೆಸುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಬಹುದು. ಅದರ ಜೊತೆ ಈ ಆಟಗಳನ್ನು ಪ್ರಚಾರ ಮಾಡುವ ಜಾಹೀರಾತುದಾರರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸುವ ನಿಯಮವನ್ನು ಬಿಲ್​ನಲ್ಲಿ ಸೇರಿಸಿರುವುದು ಉತ್ತಮ ಬೆಳವಣಿಗೆ.

ಮಕ್ಕಳು ಅಥವಾ ಯುವಕರು ಇಂತಹ ಗೀಳಿಗೆ ಒಳಗಾಗುವ ಮುನ್ನವೇ ಪಾಲಕರು ನಿಗಾವಹಿಸಬೇಕು, ಎಚ್ಚೆತ್ತುಕೊಳ್ಳಬೇಕು. ಅವರ ಚಲನವಲನದ ಮೇಲೆ ಹದ್ದಿನ ಕಣ್ಣಿಡಬೇಕು. ಒಬ್ಬರೇ ರೂಮ್ಲ್ಲಿ ಇರಲು ಆರಂಭಿಸಿದ್ದರೆ, ಇಲ್ಲವೇ ಬಾಗಿಲು ಹಾಕಿ ಕೊಂಡು ಯಾರೊಂದಿಗೂ ಬೆರೆಯದೇ ಇರುತ್ತಾರೆ ಎಂದರೆ ಇಂತಹ ಗೇಮ್ ಸುಳಿಗೆ ಸಿಲುಕಿದ್ದಾರೆ ಎಂತಲೇ ಅರ್ಥ. ಕಾಲೇಜ್​ಗೆ ಹೋಗಲು, ಕೆಲಸಕ್ಕೆ ಹೋಗಲು ಒಪ್ಪದಿದ್ದರೆ ಇಲ್ಲವೇ ಸುಳ್ಳು ಹೇಳಿ ಎಲ್ಲೋ ಕುಳಿತು ಆಟ ಆಡುತ್ತಿದ್ದರೆ ಅವರು ಇಂತಹ ಕೂಪಕ್ಕೆ ಸಿಲುಕಿ ದ್ದಾರೆ ಎನ್ನುವುದು ಖಚಿತ. ಇದು ಭವಿಷ್ಯದ ಪ್ರಶ್ನೆ. ಬದುಕಿನ ಪ್ರಶ್ನೆ.